ನವರಸನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದೆ. ಕಾರು ಹಾಗೂ ಸಂಬಂಧಗಳ ಸುತ್ತ ಸುತ್ತುವ ಕಥಾಹಂದರ ಹೊಂದಿರುವ ಸಿನಿಮಾವನ್ನು ರಮೇಶ್ ಇಂದಿರ ನಿರ್ದೇಶಿಸಿದ್ದಾರೆ.
ಯುಗಾದಿ ಸಂಭ್ರಮದ ವಿಶೇಷ ದಿನದಂದೇ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ. ಪಂಚಿಂಗ್ ಕಾಮಿಡಿಯಿಂದ ಆರಂಭವಾಗುವ 'ಪ್ರೀಮಿಯರ್ ಪದ್ಮಿನಿ' ಟ್ರೇಲರ್ ನೊಳಗೊಂದು ಸೀರಿಯಸ್ ಕಥೆಯಿದೆ. ಜಗ್ಗೇಶ್ ತಮ್ಮ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಬಹಳ ಡಿಫರೆಂಟ್ ಆಗಿ ಕಾಣುತ್ತಾರೆ. 'ಪ್ರೀಮಿಯರ್ ಪದ್ಮಿನಿ'ಯಲ್ಲಿ ನಟಿಸುವ ಮೂಲಕ ಬಹಳ ವರ್ಷಗಳ ನಂತರ ಮಧುಬಾಲ ಕನ್ನಡದಲ್ಲಿ ಬೆಳ್ಳಿಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಧು, ಸುಧಾರಾಣಿ, ಜಗ್ಗೇಶ್ ಕಾಂಬಿನೇಷನ್ ಚೆನ್ನಾಗಿ ವರ್ಕೌಟ್ ಆಗಿದೆ.
ಕಾರು ಈ ಚಿತ್ರದ ಹೈಲೆಟ್ ಆಗಿದೆ. 'ಗೀತಾ ಬ್ಯಾಂಗಲ್ ಸ್ಟೋರ್' ಮೂಲಕ ಗಮನ ಸೆಳೆದಿದ್ದ ಪ್ರಮೋದ್ ಈ ಚಿತ್ರದಲ್ಲಿ ಕಾರ್ ಡ್ರೈವರ್ ಪಾತ್ರದಲ್ಲಿ ಜಗ್ಗೇಶ್‌ಗೆ ಸಾಥ್ ಕೊಟ್ಟಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು, ಕಿರುತೆರೆ ಧಾರಾವಾಹಿಗಳನ್ನು ಹೆಚ್ಚು ನಿರ್ಮಿಸುತ್ತಿರುವ ಶ್ರುತಿ ನಾಯ್ಡು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದೇ ತಿಂಗಳು 26ಕ್ಕೆ 'ಪ್ರೀಮಿಯರ್ ಪದ್ಮಿನಿ' ತೆರೆಗೆ ಬರಲಿದೆ.