ವಾಯುಪುತ್ರ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಯುವ ಸಾಮ್ರಾಟ್ ಆಗಿದ್ದ ಚಿರಂಜೀವಿ ಸರ್ಜಾ ಇನ್ನು ನೆನಪು ಮಾತ್ರ. ಹೃದಯಾಘಾತದಿಂದ ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿರುವ ಚಿರಂಜೀವಿ ಸರ್ಜಾ ಬಗ್ಗೆ, ನಿರ್ದೇಶಕ ಹಾಗು ಸಾಹಿತಿ ನಾಗೇಂದ್ರ ಪ್ರಸಾದ್ ಬಗ್ಗೆ ಮನದಾಳವ ಬಿಚ್ಚಿಟ್ಟಿದ್ದಾರೆ.
2009ರಲ್ಲಿ ವಾಯುಪುತ್ರ ಚಿತ್ರದ ಗೀತರಚನೆಗೆ ನನ್ನನ್ನು ಅರ್ಜುನ್ ಸರ್ಜಾ ಚೆನ್ನೈ ಗೆ ಕರೆಸಿದ್ದರು. ಅರ್ಜುನ್ ಸರ್ಜಾ ಸಹೋದರಿಯ ಮಗ ಹೀರೋ ಆಗುತ್ತಾನಂತೆ ಅನ್ನುವ ಸುದ್ದಿ ಅಷ್ಟು ಹೊತ್ತಿಗೆ ಎಲ್ಲರಿಗೂ ಗೊತ್ತಿತ್ತು. ಕನ್ನಡ ಚಿತ್ರರಂಗದಲ್ಲಿ ಖಳ ನಟನಾಗಿ ಬೆಳ್ಳಿ ತೆರೆ ಮೇಲೆ ರಾರಾಜಿಸಿದ ಶಕ್ತಿ ಪ್ರಸಾದ್ ಮೊಮ್ಮಗ, ಅರ್ಜುನ್ ಸರ್ಜಾ ಅವರ ಗರಡಿಯಲ್ಲಿ ಪಳಗಿದ ಹುಡುಗ ನೋಡಲು ಹೇಗಿರುತ್ತಾನೆ? ಅನ್ನುವ ಕುತೂಹಲ ನನಗೂ ಇತ್ತು.
ಚೆನ್ನೈನ ಅರ್ಜುನ್ ಸರ್ಜಾ ಕಚೇರಿಗೆ ಬೆಳಗ್ಗೆ 9 ಗಂಟೆ ಸುಮಾರಿಗೆ ಹೋಗಿ ಕುಳಿತೆ. ಅದೊಂದು ಕಚೇರಿ ಹಾಗೂ ಗೆಸ್ಟ್ ಹೌಸ್. ಅರ್ಜುನ್ ಬರುವುದಕ್ಕೆ ಇನ್ನೂ ಸಮಯವಿತ್ತು. ಅವರ ಮ್ಯಾನೇಜರ್ ರಾಮಕೃಷ್ಣ ನನ್ನನ್ನು ಉಪಚರಿಸಿದರು. ಬಾಗಿಲಿನಿಂದ ಬಂದ ಒಬ್ಬ ಹುಡುಗ ನನ್ನತ್ತ ಬಂದು ನಮಸ್ಕಾರ ಹೇಳಿದ. ಚೆನ್ನೈ ನಲ್ಲಿ ಕನ್ನಡ ಕೇಳುವ ಖುಷಿಯೇ ಬೇರೆ. ಪ್ರತಿ ನಮಸ್ಕಾರ ಹೇಳಿದೆ.
ಆ ಹುಡುಗ ಬಂದವನೇ ನನ್ನ ಪಕ್ಕದಲ್ಲಿ ಕುಳಿತ. ಅವನನ್ನೇ ದಿಟ್ಟಿಸಿ ನೋಡಿದೆ. ನಾನು ಚಿರಂಜೀವಿ ಸರ್. ನಿಮ್ಮ ಹಾಡುಗಳ ಫ್ಯಾನ್ ಅಂದ. ಸಂತೋಷದಿಂದ ಥ್ಯಾಂಕ್ಸ್ ಹೇಳಿದೆ. ಅಷ್ಟು ಹೊತ್ತಿಗೆ ಈ ಹುಡುಗನೇ ಆ ಹೊಸ ಹೀರೋ ಎಂದು ಅರ್ಥವಾಯಿತು.
ಜಿಮ್ ಮಾಡಿದ ದೇಹ, ಆರೋಗ್ಯಪೂರ್ಣ ಮಂದಹಾಸ, ಕಣ್ಣುಗಳಲ್ಲಿ ಮಿಂಚು ಇತ್ತು. ಈ ಹುಡುಗ ತನ್ನ ಆಸಕ್ತಿ ಮತ್ತು ಅಭಿರುಚಿಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾ ಹೋದ. ಅವನ ಮಾತುಗಳಲ್ಲಿ ಏನನ್ನೋ ಸಾಧಿಸುವ ಹುಮ್ಮಸ್ಸು. ತನ್ನ ಅಪೀಯರೆನ್ಸ್ ಬಗ್ಗೆ, ನೃತ್ಯದ ಬಗ್ಗೆ, ತನ್ನ ಆಕ್ಷನ್ ಹಾಗೂ ಆ ಸಿನಿಮಾದಲ್ಲಿ ತಾನು ಕಾಣಬಯಸುವುದರ ಬಗ್ಗೆ ಹೇಳಿದ. ಚಿರಂಜೀವಿಯ ಮುಗ್ಧತೆ, ಪ್ರಾಮಾಣಿಕತೆ ನನ್ನನ್ನು ಸೆಳೆದವು ಅಂತಾರೆ ನಾಗೇಂದ್ರ ಪ್ರಸಾದ್.
ನಾನು ಶಕ್ತಿ ಪ್ರಸಾದ್ ಅವರ ಹಿಂದಿನ ತಲೆಮಾರಿನವರಾದರೂ ಅವರ ಅಭಿನಯ ಹಾಗೂ ವ್ಯಕ್ತಿತ್ವದ ಬಗ್ಗೆ ಅಪಾರ ಅಭಿಮಾನ. ಅರ್ಜುನ್ ಸರ್ಜಾ ಅವರು ತಮಿಳು ನಾಡಿನಲ್ಲಿ ಸಾಧಕರಾಗಿ ಹೆಜ್ಜೆ ಊರಿರುವ ಬಗ್ಗೆ ವಿಶೇಷ ಪ್ರೀತಿ. ಕಿಶೋರ್ ಸರ್ಜಾ ಅವರ ಸ್ನೇಹಪರತೆ, ವೃತ್ತಿಪರತೆಯ ಮೇಲೆ ನನಗಿರುವ ಆಪ್ಯಾಯತೆ. ಇವೆಲ್ಲವೂ ಚಿರಂಜೀವಿ ಸರ್ಜಾನನ್ನು ಹೆಚ್ಚು ಪ್ರೀತಿಸಲು ಅನುವು ಮಾಡಿಕೊಟ್ಟವು. ಒಂದೇ ಭೇಟಿಯಲ್ಲಿ ತೀರಾ ಹತ್ತಿರಾಗಿಬಿಟ್ಟ ಹುಡುಗ. ಅವನಿಗೆ ಕಿಶೋರ್ ಸರ್ಜಾ ಅಂದರೆ ಅಪರಿಮಿತ ಪ್ರೇಮ. ಅನನ್ಯ ಭಕ್ತಿ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
ಚಿರಂಜೀವಿಯ ಉತ್ಸಾಹ ನೋಡಿದ ಮೇಲೆ ಒಂದಷ್ಟು ಹಿತನುಡಿ ಹೇಳುವ ಮನಸಾಯಿತು. ಚಿರು ನಿನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ನಿಮ್ಮ ಮಾವ ನಿನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಬೇಕು. ಒಳ್ಳೆಯ ಹೆಸರು ಮಾಡುವ ಅವಕಾಶವಿದೆ. ಯಶಸ್ವಿ ಹೀರೋ ಆಗುವ ಲಕ್ಷಣಗಳಿವೆ. ಡೈರೆಕ್ಟರ್ಗೆ ಹಾಗೂ ಪ್ರೊಡ್ಯೂಸರ್ಗೆ ಗೌರವ ಕೊಡುವುದನ್ನು ಮಾತ್ರ ಯಾವತ್ತೂ ಮರೆಯಬೇಡ. ಅದೇ ನಿನ್ನನ್ನು ಕಾಯುವುದು. ನಿಮ್ಮ ಮಾವನೇ ಅದಕ್ಕೆ ಉದಾಹರಣೆ" ಎಂದು ಒಂದಷ್ಟು ಉದ್ದದ ಭಾಷಣವೇ ಬಿಗಿದು ಬಿಟ್ಟೆ.
ಇವತ್ತಿನ ಅನೇಕ ಹೀರೋಗಳನ್ನು, ಸ್ಟಾರ್ಗಳನ್ನು ಮೊದಲ ಸಿನಿಮಾದಿಂದ ತೀರಾ ಹತ್ತಿರದಿಂದ ಬಲ್ಲೆನಾದ್ದರಿಂದ ಅವರಿಗೆ ಕೊಟ್ಟಿದ್ದ ಉಪದೇಶಗಳನ್ನೇ ಚಿರುವಿಗೂ ನೀಡಿದೆ. ಕೈ ಕಟ್ಟಿಕೊಂಡು ಎಲ್ಲವನ್ನೂ ಆಲಿಸಿದ ಚಿರು "ಹೂಂ ಸರ್. ನೀವು ಹೇಳಿದ್ದೆಲ್ಲ ನಮ್ಮ ಮಾವನೂ ಹೇಳಿದ್ದಾರೆ. ಅವರು ಹಾಕಿದ ಗೆರೆ ದಾಟೊಲ್ಲ. ಅವರ ಹಾಗೆ ಒಳ್ಳೆ ಹೆಸರು ತಗೋತೀನಿ" ಅಂದ.
ತಮ್ಮ ಧೃವನ ಬಗ್ಗೆ, ಅಮ್ಮ, ಅಜ್ಜಿ , ಮಾವಂದಿರ ಬಗ್ಗೆ ಬಲು ಪ್ರೀತಿಯಿಂದ ಹೇಳಿಕೊಂಡ. ಸುಮಾರು ತಾಸು ಮಾತಾಡಿದೆವು. ಅರ್ಜುನ್ ಸರ್ಜಾ ಅವರ ಆಗಮನವಾಯಿತು. ಬಂದವರೇ ಚಿರುವನ್ನು ಗಧರಿಸ ತೊಡಗಿದರು. "ವ್ಯಾಯಾಮ ಮಾಡಿಲ್ಲವಂತೆ. ಮೊನ್ನೆ ಎಲ್ಲೋ ಹೋಗಿದ್ಯಂತೆ" ಇತ್ಯಾದಿ ಇತ್ಯಾದಿ ದೂರುಗಳನ್ನು ಹೇಳಿ ಗಧರಿಸಿದರು. "ಇಲ್ಲಾ ಮಾಮಾ..ಮಾಡಿದೆ.....ಮೊನ್ನೆ ಎಲ್ಲೂ ಹೋಗಿಲ್ಲ.."ಎಂದು ಏನೋ ಸಮಜಾಯಿಶಿ ಕೊಡುತ್ತಾ ಮಾವನನ್ನು ಚಿರು ಮುದ್ದು ಮಾಡಿದ.
ಅವರು ನಗುತ್ತಾ ಒಂದಷ್ಟು ಸಲಹೆ ನೀಡಿದರು. ನಂತರ ಹಾಡಿನ ಚರ್ಚೆ ಆರಂಭವಾಯಿತು. ವಾಯುಪುತ್ರ ಚಿತ್ರ ಬಿಡುಗಡೆಯೂ ಆಯಿತು. ಇದಾದ ನಂತರ. ವರದನಾಯಕ, ಅಮ್ಮ ಐ ಲವ್ ಯೂ, ಸಿಂಗ ಮುಂತಾದ ಚಿತ್ರಗಳ ಸಂದರ್ಭಗಳಲ್ಲಿ ನನ್ನ ಮತ್ತು ಚಿರುವಿನ ಭೇಟಿಯಾಗುತ್ತಿತ್ತು. ನನ್ನನ್ನು ನೋಡಿದಾಗಲೆಲ್ಲಾ ಅದೇ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳುತ್ತಿದ್ದ ಕಿರಿಯ ಮಿತ್ರ ಚಿರು ಅಂತಾರೆ ನಾಗೇಂದ್ರ ಪ್ರಸಾದ್.
ಹಲವಾರು ಭೇಟಿ ಮತ್ತು ನೆನಪುಗಳನ್ನು ನನ್ನಲ್ಲಿ ಬಿಟ್ಟು ಹೋಗಿದ್ದಾನೆ. ಯಾವಾಗಲೂ ಮಳೆಯ ಸಂಜೆಗಳಲ್ಲಿ ನೆನಪಾಗುತ್ತಿದ್ದ. ಇನ್ನು ಮುಂದೆ ಹೆಚ್ಚು ನೆನಪಾಗುತ್ತಾನೆ. ವಿನಾಕಾರಣದ ಪ್ರೀತಿಗೆ ಒಳಗು ಮಾಡಿದವನು. ಅಕಾಲಿಕವಾಗಿ ಹೋಗಿಬಿಟ್ಟ. ಅಪಾರ ದುಖಃವನ್ನು ಉಳಿಸಿಹೋದ ಚಿರುವಿನ ಅಂದಿನ ಮಂದಹಾಸ ಎಂದಿಗೂ ನನ್ನ ಸ್ಮೃತಿ ಪಟಲದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಹೋಗಿ ಬಾ ಮಿತ್ರ. ಚಿರು ಐ ಲವ್ ಯೂ ಎಂದು ವಿ.ನಾಗೇಂದ್ರ ಪ್ರಸಾದ್ ಸಂತಾಪ ಸೂಚಿಸಿದ್ದಾರೆ.