ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಸಿನಿಮಾ 'ಕನ್ನೇರಿ'ಯ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಹೊಸ ಪ್ರತಿಭೆಗಳ ಚಿತ್ರತಂಡಕ್ಕೆ ಸಾಥ್ ನೀಡಿ, ಆಲ್ ದಿ ಬೆಸ್ಟ್ ಹೇಳಿದರು.
ಕೋಟಿಗಾನಹಳ್ಳಿ ರಾಮಯ್ಯ ಬರೆದಿರುವ ಕಾದಂಬರಿ ಆಧರಿತ ಚಿತ್ರಕ್ಕೆ ನಿರ್ದೇಶಕ ನೀನಾಸಂ ಮಂಜು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮಂಜು ಚಿತ್ರಕಥೆಯ ಜತೆಗೆ ಕಲಾ ನಿರ್ದೇಶನ ಕೂಡ ನಿಭಾಯಿಸಿದ್ದಾರೆ. ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.
ಪ್ರಕೃತಿಯ ಮಡಿಲಿನಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನರನ್ನು, ಅರಣ್ಯ ಇಲಾಖೆ ಒಕ್ಕಲೆಬ್ಬಿತು. ಇದರಿಂದ ಅವರ ಬದುಕು ಸಂಕಷ್ಟಕ್ಕೆ ಸಿಲುಕಿತು. ಹೆಣ್ಣುಮಕ್ಕಳು ಪಟ್ಟಣದಲ್ಲಿ ಮನೆಗೆಲಸಕ್ಕೆ ಸೇರಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ರೀತಿ ಪಟ್ಟಣಕ್ಕೆ ಬಂದ ಬುಡಕಟ್ಟು ಜನಾಂಗದ ಬಾಲಕಿ ಮುತ್ತಮ್ಮ ಯಾನೆ ಕನ್ನೇರಿ ಮನೆಗೆಲಸ ಮಾಡುವಾಗ ಮನೆಯ ಮಾಲೀಕಳ ದೌರ್ಜನ್ಯಕ್ಕೆ ತುತ್ತಾಗಿ ಜೈಲು ಸೇರುತ್ತಾಳೆ. ಆಕೆ ಜೈಲಿನಿಂದ ಹೊರಬರಲು ನಡೆಸುವ ಹೋರಾಟದ ಕಥಾಹಂದರವೇ ಈ 'ಕನ್ನೇರಿ'.
ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಎಂ.ಕೆ.ಮಠ್, ಅರುಣ್ ಸಾಗರ್, ಕರಿಸುಬ್ಬು, ಸರ್ದಾರ್ ಸತ್ಯ ಒಳಗೊಂಡ ಪ್ರತಿಭಾನ್ವಿತ ಕಲಾವಿದರ ತಂಡ ಚಿತ್ರದಲ್ಲಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದೆ.
ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ಪಿ.ಪಿ ಹೆಬ್ಬಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಣೇಶ್ ಹೆಗ್ಡೆ ಛಾಯಾಗ್ರಹಣ , ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ 'ಕನ್ನೇರಿ' ಚಿತ್ರಕ್ಕಿದೆ.