'ರಾಮಾ ರಾಮಾ ರೇ' ಹಾಗು 'ಒಂದಲ್ಲಾ ಎರಡಲ್ಲಾ' ಚಿತ್ರಗಳನ್ನ ಮಾಡಿ, ಸ್ಯಾಂಡಲ್ವುಡ್ನಲ್ಲಿ ಭರವಸೆ ಹುಟ್ಟಿಸಿರೋ ನಿರ್ದೇಶಕ ಸತ್ಯ ಪ್ರಕಾಶ್ ಇದೀಗ 'ಮ್ಯಾನ್ ಆಫ್ ದಿ ಮ್ಯಾಚ್' ಅಂತಾ ಕ್ಯಾಚೀ ಟೈಟಲ್ ಇಟ್ಟು ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ. 'ರಾಮಾ ರಾಮಾ ರೇ' ಚಿತ್ರದ ನಟ ಧರ್ಮಣ್ಣ, ನಟರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಧರ್ಮಣ್ಣ ನಿರ್ಮಾಪಕನಾಗಿ ಕಾಣಿಸಿಕೊಂಡರೆ, ನಿರ್ದೇಶಕನಾಗಿ ನಟರಾಜ್ ಇರಲಿದ್ದಾರೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ನೀಡಿದ್ದಲ್ಲದೆ, ಸಿನಿಮಾದಲ್ಲಿಯೂ ವೈಭವ್ ಪಾತ್ರವೊಂದು ಮಾಡ್ತಾರೆ ಅಂತಾ ಹೇಳಲಾಗಿತ್ತು. ಬಹುತೇಕ ಚಿತ್ರೀಕರಣ ಮುಗಿಸಿರೋ ಚಿತ್ರದಲ್ಲಿ, ವಾಸುಕಿ ವೈಭವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಹಾಡಿ ಕುಣಿದಿದ್ದಾರೆ. ವೈಭವ್ ಎಂಟ್ರೀ ನೃತ್ಯವನ್ನ ಸ್ವತಃ ನಿರ್ದೇಶಕ ಡಿ. ಸತ್ಯ ಪ್ರಕಾಶ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಸಿನಿಮಾದ ವಸ್ತು ವಿಷಯವನ್ನು ತಿಳಿಸುವ ಈ ಹಾಡಿಗೆ, ಯೋಗರಾಜ್ ಭಟ್ ಮತ್ತು ಡಿ ಸತ್ಯ ಪ್ರಕಾಶ್ ಜಂಟಿಯಾಗಿ ಸಾಹಿತ್ಯವನ್ನು ಬರೆದಿದ್ದಾರೆ.
ಪುನೀತ್ ರಾಜಕುಮಾರ್ ಅವರ ಪಿಆರ್ಕೆ ನಿರ್ಮಾಣ ಸಂಸ್ಥೆಯ ಬ್ಯಾನರಿನ ಅಡಿಯಲ್ಲಿ ಹಾಗೂ ಸತ್ಯ ಮತ್ತು ಮಯೂರ ಪಿಕ್ಚರ್ಸ್ ಜತೆಗೂಡಿ ತಯಾರಿಸುತ್ತಿರುವ "ಮ್ಯಾನ್ ಆಫ್ ದಿ ಮ್ಯಾಚ್" ಚಲನಚಿತ್ರ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿದೆ. ಸತ್ಯ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ, ಗಾಯಕ ವಾಸುಕಿ ವೈಭವ್ ಹೇಗೆ ಕಾಣ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.