ಗಾಂಧಿನಗರದ ಸುತ್ತಮುತ್ತ ಇದ್ದ ಪ್ರಭಾತ್, ಸಾಗರ್, ಅಲಂಕಾರ್, ಗೀತಾ, ಮೆಜೆಸ್ಟಿಕ್, ತ್ರಿಭುವನ್, ಕೈಲಾಶ್, ಕೆಂಪೇಗೌಡ, ಕಲ್ಪನಾ, ಹಿಮಾಲಯ, ಕಪಾಲಿ ಸೇರಿದಂತೆ ಸಾಲು ಸಾಲು ಚಿತ್ರಮಂದಿರಗಳು ಕಾಣೆಯಾಗಿವೆ. ಉಳಿದಿರುವ ಚಿತ್ರಮಂದಿರಗಳು ಸದ್ಯದಲ್ಲೇ ನೆಲಸಮ ಆಗಲಿವೆ ಎನ್ನಲಾಗುತ್ತಿದೆ. ಸಂತೋಷ್, ನರ್ತಕಿ, ಸಪ್ನ, ಅಭಿನಯ್, ಅನುಪಮ, ತ್ರಿವೇಣಿ, ಭೂಮಿಕಾ, ಮೂವಿಲ್ಯಾಂಡ್, ಮೇನಕಾ ಚಿತ್ರಮಂದಿರಗಳ ಸ್ಥಿತಿ ಸರಿಯಿಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಸಾಗರ್ ತ್ರಿಭುವನ್, ಕೈಲಾಶ್ ಥಿಯೇಟರ್ಗಳನ್ನು ಕೆಡವಿ ಅಲ್ಲಿ ಮಳಿಗೆಗಳನ್ನು ಕಟ್ಟಲಾಯಿತು. ಇದಕ್ಕೂ ಮೊದಲೇ ಪ್ರಭಾತ್, ಅಲಂಕಾರ್, ಕಲ್ಪನಾ, ಕೆಂಪೇಗೌಡ, ಹಿಮಾಲಯ, ಗೀತಾ ಚಿತ್ರಮಂದಿರಗಳು ಕೂಡಾ ಮಳಿಗೆಗಳ ಪಾಲಾಗಿತ್ತು. ಇನ್ನು ಮೆಜೆಸ್ಟಿಕ್ ಹಾಗೂ ಕಪಾಲಿ ಥಿಯೇಟರ್ ಸ್ಥಳದಲ್ಲಿ ಏನು ಬರುತ್ತದೆ ಎಂದು ಗೊತ್ತಿಲ್ಲ.
ಇದರೊಂದಿಗೆ ಗಾಂಧಿನಗರದಲ್ಲಿ ಇರುವ ನಿರ್ಮಾಪಕ, ವಿತರಕರ ಕಚೇರಿಗಳು ಕೂಡಾ ಅಲ್ಲಿಂದ ಕಾಣೆಯಾಗಿವೆ. ವಜ್ರೆಶ್ವರಿ ಕಂಬೈನ್ಸ್ ಕೂಡಾ ವ್ಯಾಪಾರ ಮಳಿಗೆ ಆಗಿ ಬದಲಾಗಿದೆ. ರಾಮು, ವಿ.ರವಿಚಂದ್ರನ್, ಶೈಲೇಂದ್ರ ಬಾಬು ಕಚೇರಿಗಳು ಕೂಡಾ ಈಗ ಇಲ್ಲ. ಇದೀಗ ಬಹುತೇಕ ಸಿನಿಮಾ ಚಟುವಟಿಕೆಗಳು ನಾಗರಬಾವಿ, ಚಂದ್ರಾ ಲೇಔಟ್ ಹಾಗೂ ರಾಜರಾಜೇಶ್ವರಿ ನಗರಕ್ಕೆ ಶಿಫ್ಟ್ ಆಗಿವೆ.
ನಾಗರಬಾವಿಯೇ ಈಗ ಮಿನಿ ಗಾಂಧಿನಗರ ಎಂದು ಹೇಳಲಾಗುತ್ತಿದೆ. ಜಯಣ್ಣ-ಭೋಗೇಂದ್ರ, ಪುಷ್ಕರ್ ಫಿಲ್ಮ್ಸ್, ರಕ್ಷಿತ್ ಶೆಟ್ಟಿ ಕಚೇರಿ, ಎಸ್. ಕೃಷ್ಣ ಕಚೇರಿ, 8 ಎಕರೆ ಜಾಗದಲ್ಲಿ ಕಲರ್ಸ್ ಕನ್ನಡ ವಾಹಿನಿ, ನಿರ್ಮಾಪಕ ಸೋಮಶೇಖರ್, ಸಾಧು ಕೋಕಿಲ ಅವರ 4 ಅಂತಸ್ತಿನ ರೆಕಾರ್ಡಿಂಗ್ ಸ್ಟುಡಿಯೋ, ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ, ವಿತರಕ ಮಹೇಶ್ ಕೊಠಾರಿ ಅವರ ಸ್ಟುಡಿಯೋ ನಾಗರಭಾವಿಯಲ್ಲಿದೆ.
ಇದರೊಂದಿಗೆ ರಂಗಿ ತರಂಗ ಹಾಗೂ ಶ್ರೀಮನ್ನಾರಾಯಣ ನಿರ್ಮಾಪಕ ಪ್ರಕಾಶ್ ಕಚೇರಿ, ನಟ ಶರಣ್ ಮನೆ ಹಾಗೂ ಕಚೇರಿ, ಜಿಮ್ ರವಿ ಫಿಟ್ನೆಸ್ ಹಾಗೂ ಮನೆ, ರಾಧಿಕಾ ಕುಮಾರಸ್ವಾಮಿ ಕಚೇರಿ, ರಥಸಪ್ತಮಿ ಅರವಿಂದ್, ವಿಠಲ್ ಭಟ್ ಕಚೇರಿ, ಅವಿನಾಶ್, ಮಾಳವಿಕ ಅವರ ಮನೆ, ನವರಸನ್ ಸ್ಟುಡಿಯೋ ಹಾಗೂ ಕಚೇರಿ, ಪಯಣ ಚಿತ್ರದ ನಿರ್ದೇಶಕ ಕಿರಣ್ ಗೋವಿ ಸ್ಟುಡಿಯೋ-ಕಚೇರಿ, ನಿರ್ಮಾಪಕ ದೊಡ್ಮನೆ ವೆಂಕಟೇಶ್ ಮನೆ-ಕಚೇರಿ, ಸಂಕಲನಕಾರ ಕೆ.ಎಂ ಪ್ರಕಾಶ್ ಸ್ಟುಡಿಯೋ ಸೇರಿ ಬಹುತೇಕರ ಮನೆ ಹಾಗೂ ಕಚೇರಿಗಳು ಇದೇ ಸ್ಥಳದಲ್ಲಿವೆ.
ನಾಗರಬಾವಿಯಿಂದ ಸುಮಾರು 5 ಕಿ.ಮೀ ದೂರದಲ್ಲಿ ಕುಬೇರ ಮೂಲೆ ಎಂದೇ ಪ್ರಸಿದ್ಧಿ ಆಗಿರುವ ರಾಜ ರಾಜೇಶ್ವರಿ ನಗರದಲ್ಲಿ ಕೂಡಾ ಕನ್ನಡ ಚಿತ್ರರಂಗದ ಬಹಳಷ್ಟು ವ್ಯಕ್ತಿಗಳು ಮನೆ ಹಾಗೂ ಕಚೇರಿ ಮಾಡಿಕೊಂಡು ನೆಲೆಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಗಣೇಶ್, ರಕ್ಷಿತ್ ಶೆಟ್ಟಿ, ನಿರ್ಮಾಪಕ ಮಾರುತಿ ಜಾಡಿಯರ್, ಮುನಿರತ್ನ ನಾಯ್ಡು, ಗೌತಮ್ ಶ್ರೀವಾತ್ಸವ್ ಸ್ಟುಡಿಯೋ, ನೀನಾಸಂ ಸತೀಶ್, ಹರಿಪ್ರಿಯಾ, ಕಾರುಣ್ಯ ರಾಮ್, ನಿರ್ದೇಶಕರಾದ ಶಶಾಂಕ್ ರಾಜ್ , ಮಹೇಶ್ ಸುಖಧರೆ, ಉಮೇಶ್ ಬಣಕರ್, ದಿಗಂತ್, ಐಂದ್ರಿತಾ ಮನೆ, ಹೀಗೆ ಬಹಳಷ್ಟು ಸೆಲಬ್ರಿಟಿಗಳು ಇಲ್ಲಿ ನೆಲೆಸಿದ್ದಾರೆ.
ನಾಗರಭಾವಿಗೆ ಮುನ್ನ ಸಿಗುವ ಚಂದ್ರಾ ಲೇ ಔಟ್ನಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಸ್ಟುಡಿಯೋ, ರಕ್ಷಿತಾ ಪ್ರೇಮ್ ಕಚೇರಿ ಹಾಗೂ ಮನೆ ಹಾಗೂ ಇನ್ನಿತರ ಸೆಲಬ್ರಿಟಿಗಳ ಮನೆ ಇವೆ.
ಒಟ್ಟಿನಲ್ಲಿ ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಶಂಕರ್ ನಾಗ್, ರೆಬಲ್ ಸ್ಟಾರ್ ಅಂಬರೀಶ್ ಅವರಂತ ಮಹಾನ್ ನಟರು ಓಡಾಡಿದ್ದ ಗಾಂಧಿನಗರ ಇಂದು ಕಣ್ಮರೆಯಾಗುತ್ತಿರುವುದು ಚಿತ್ರಪ್ರೇಮಿಗಳಿಗೆ ಬೇಸರವುಂಟು ಮಾಡಿರುವುದಂತೂ ನಿಜ.