ಕೊರೊನಾ, ಮನರಂಜನಾ ಮಾಧ್ಯಮಕ್ಕೆ ದೊಡ್ಡ ಪೆಟ್ಟನ್ನೇ ನೀಡಿದೆ. 100 ವರ್ಷಕ್ಕೂ ಹೆಚ್ಚು ಇತಿಹಾಸ ಇರುವ ಭಾರತೀಯ ಚಿತ್ರರಂಗದಲ್ಲಿ ಮಹಾಯುದ್ಧ ಆದಾಗಲೂ ಇಷ್ಟು ತೊಂದರೆಯಾಗಿರಲಿಲ್ಲ ಎನ್ನಬಹುದು. ಜೊತೆಗೆ ಕೊರೊನಾ ಕೆಲವರಿಗೆ ಪಾಠ ಕೂಡಾ ಕಲಿಸಿದೆ ಎನ್ನಬಹುದು.
ಥಿಯೇಟರ್ಗಳು ಆರಂಭವಾಗಿ ಸಿನಿಮಾ ಪ್ರದರ್ಶನ ಆರಂಭವಾಗುವವರೆಗೆ ನಾವು ಚಿತ್ರೀಕರಣಕ್ಕೆ ಹೋಗುವುದು ಬೇಡ ಎಂದು ಚಿತ್ರರಂಗದ ಗಣ್ಯರು ನಿರ್ಧರಿಸಿದಂತಿದೆ. ಚಿತ್ರೀಕರಣ ಸ್ಥಗಿತದಿಂದ ದಿನಗೂಲಿ ನೌಕರರೊಂದಿಗೆ ನಿರ್ಮಾಪಕರಿಗೆ ಕೂಡಾ ಸಾಕಷ್ಟು ನಷ್ಟವಾಗಿದೆ.
ಈ ಸಂದರ್ಭದಲ್ಲಿ ಮಲಯಾಳಂ ಚಿತ್ರರಂಗ ನಿನ್ನೆ ಒಂದು ನಿರ್ಧಾರಕ್ಕೆ ಬಂದಿದೆ. ಬಹುತೇಕ ಸ್ಟಾರ್ ನಟರು ತಮ್ಮ ಸಂಭಾವನೆಯಲ್ಲಿ ಅರ್ಧದಷ್ಟು ಸಂಭಾವನೆ ಪಡೆಯುವಂತೆ ಮನವಿ ಮಾಡಲಾಗಿದೆ. ಇದಕ್ಕೆ ನಟರು ಕೂಡಾ ಒಪ್ಪಿದ್ದಾರೆ ಎನ್ನಲಾಗಿದೆ. ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ (AMMA)ಈ ನಿರ್ಧಾರ ಮಾಡಿದೆ. AMMA ತೆಗೆದುಕೊಂಡ ಈ ನಿರ್ಧಾರವನ್ನು ಭಾರತೀಯ ಸಿನಿಮಾರಂಗದ ಎಲ್ಲರೂ ಪಾಲಿಸುವ ಮುನ್ಸೂಚನೆ ಕಂಡುಬರುತ್ತಿದೆ. ಆದರೆ ಅದು ಕನ್ನಡ ಚಿತ್ರರಂಗದಲ್ಲಿ ಸಾಧ್ಯಾನಾ ಎಂದು ಕಾದುನೋಡಬೇಕಿದೆ. ಏಕೆಂದರೆ ಕನ್ನಡ ಚಿತ್ರರಂಗದಲ್ಲಿ ಈ ಬಗ್ಗೆ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.