ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ ಅವರ ಕಟ್ಟಾ ಅಭಿಮಾನಿಯೊಬ್ಬರು ಇದೀಗ ನಿರ್ದೇಶಕರಾಗಿ ಕ್ಯಾಪ್ ಧರಿಸಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಷ್ಣು ದಾದಾ ಅವರ ಈ ಅಭಿಮಾನಿ ಎಂ ಎನ್ ಶ್ರೀಕಾಂತ್ ‘ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.
ಹಾಸನ ಮೂಲದ ಶ್ರೀಕಾಂತ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಬಿಟ್ಟು ಈಗ ಕಲಾ ಜಗತ್ತಿಗೆ ಜಿಗಿದಿದ್ದಾರೆ. ಮೈಸೂರಿನಲ್ಲಿ ಶಾಲಾ-ಕಾಲೇಜು ದಿನಗಳಿಂದ ಅವರಿಗೆ ನಾಟಕ ನಿರ್ದೇಶನ ಮಾಡಿದ ಅನುಭವ ಇದೆ. ಇವರು ಡಾ ವಿಷ್ಣುವರ್ಧನ್ ಅವರ ‘ಆರಾಧನೆ’ ಸಿನಿಮಾ ನೋಡಿ ಅವರಂತೆ ಆಗಬೇಕು ಎಂದು ಕರಾಟೆ ಕಲಿತು ನಿಜ ಜೀವನದಲ್ಲಿ ನ್ಯಾಷನಲ್ ಚಾಂಪಿಯನ್ ಆದರು. ಆಮೇಲೆ ‘ಈ ಬಂಧನ’ ಬಿಡುಗಡೆ ಸಮಯದಲ್ಲಿ ಸಾಹಸ ಸಿಂಹ ಡಾ ವಿಷ್ಣು ಅವರನ್ನು ಮೈಸೂರಿನಲ್ಲಿ ಭೇಟಿ ಸಹ ಆದರು.
ಈ ಮಧ್ಯೆ ಶ್ರೀಕಾಂತ್ ಅವರಿಗೆ ನಾಲ್ಕು ಭಾಷೆಗಳ ಚಲನಚಿತ್ರಗಳಲ್ಲಿ ಸಹ ನಿರ್ದೇಶಕನಾಗುವ ಅವಕಾಶ ಸಹ ಒದಗಿ ಬಂತು. ನಿರ್ದೇಶಕನಾಗಲು ಹವಣಿಸುತ್ತಾ ಇದ್ದಾಗ ಶ್ರೀಕಾಂತ್ ಅವರ ತಾಯಿ ಮಗನಿಗೆ ಧೈರ್ಯ ಹೇಳಿ ಈ ರಂಗದಲ್ಲಿಯೇ ಮುಂದುವರಿ, ಚಿಂತಿಸಬೇಡ ಎಂದು ಆಶೀರ್ವದಿಸಿದರು.
ಇದಾದ ನಂತರ ಶ್ರೀಕಾಂತ್ ಅವರಿಗೆ ಸಿಕ್ಕ ಸಿನಿಮಾ ‘ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್’. ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿ ಈಗ ಸೆನ್ಸಾರ್ ಹಂತಕ್ಕೆ ತಂದಿದ್ದಾರೆ.
ಚಿತ್ರದಲ್ಲಿ ರಾಘವ್ ರಮಣ ಹಾಗೂ ಸಂಜನ ಬುರ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.