ತನುಜಾ ಎಂಬ ಸಿನಿಮಾದಲ್ಲಿ ಆರೋಗ್ಯ ಸಚಿವ ಸುಧಾಕರ್ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾ ಇದ್ದಾರೆ. ಇತ್ತೀಚೆಗೆಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತನುಜಾ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಿದ್ದರು. ಈ ಹಿಂದೆ 'ಅಂತರ್ಜಲ' ಸಿನಿಮಾ ಮಾಡಿ, ರಾಜ್ಯ ಪ್ರಶಸ್ತಿ ಪಡೆದಿದ್ದ ಎಂ.ಡಿ.ಹರೀಶ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಇದೊಂದು ನೈಜ ಘಟನೆ ಕಥೆಯಾಗಿದ್ದು, ಶಿಕಾರಿಪುರದ ಮಲ್ಲೇನಹಳ್ಳಿಯ ವಿದ್ಯಾರ್ಥಿಯಾಗಿರೋ ತನುಜಾ ಸಿನಿಮಾ ರೀತಿಯಲ್ಲಿ ಎಂಬಿಬಿಎಸ್ ಸೀಟು ಪಡೆದುಕೊಳ್ಳುತ್ತಾಳೆ. ಈ ಕಥೆಯನ್ನೇ ನಿರ್ದೇಶಕ ಹರೀಶ್ ತೆರೆ ಮೇಲೆ ತರುತ್ತಿದ್ದಾರೆ. ಸರ್ಕಾರಿ ಹಿ.ಪ್ರಾಥಮಿಕ ಶಾಲೆ ಚಿತ್ರದಲ್ಲಿ ಅಭಿನಯಿಸಿದ್ದ ಸಪ್ತ ಪಾವೂರು ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸುಧಾಕರ್ ಒಂದು ವಿಶೇಷ ಪಾತ್ರ ಮಾಡಲಿದ್ದಾರೆ.
ಮಾರ್ಚ್ ಎರಡನೇ ವಾರದಲ್ಲಿ ಬೆಂಗಳೂರು, ಶಿವಮೊಗ್ಗದಲ್ಲಿ ತನುಜಾ ಸಿನಿಮಾದ ಚಿತ್ರೀಕರಣ ಮಾಡಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ. ಉಳಿದ ತಾರಾಬಳಗದಲ್ಲಿ ಯಾರೆಲ್ಲಾ ಕಲಾವಿದರು ಇದ್ದಾರೆ ಎಬುದನ್ನು ನಿರ್ದೇಶಕರು ಸದ್ಯದಲ್ಲೇ ತಿಳಿಸಲಿದ್ದಾರಂತೆ.
ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣವಿರುವ 'ತನುಜಾ' ಚಿತ್ರಕ್ಕೆ ಆರ್.ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆಯುತ್ತಿದ್ದಾರೆ. ಬಿಯಾಂಡ್ ವಿಜಿಯಾನ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ.