ತರುಣ್ ಸುಧೀರ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ 'ರಾಬರ್ಟ್' ಸಿನಿಮಾ ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಸಿನಿಮಾ ಶೂಟಿಂಗ್ ಆರಂಭಕ್ಕೂ ಮುಂಚೆ ಚಿತ್ರದ ಫಸ್ಟ್ಲುಕ್ ಗಾಂಧಿನಗರದಲ್ಲಿ ಭಾರೀ ಹವಾ ಎಬ್ಬಿಸಿತ್ತು.
ಇದೀಗ ಈ ಚಿತ್ರದಲ್ಲಿ ದರ್ಶನ್ಗೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ದರ್ಶನ್ ಅಭಿಮಾನಿಗಳಲ್ಲಿ ಕ್ರಿಯೇಟ್ ಆಗಿದೆ. ನಿರ್ದೇಶಕ ತರುಣ್ ಸುಧೀರ್ ಈ ಚಿತ್ರಕ್ಕೆ ಬೇರೆ ಭಾಷೆಯ ನಾಯಕಿಯನ್ನು ಕರೆತರಲಿದ್ದಾರೆಂಬ ಸುದ್ದಿ ಈಗಾಗಲೇ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿದೆ. ರಾಬರ್ಟ್ ನಾಯಕಿಯ ಲಿಸ್ಟ್ನಲ್ಲಿ ವಿಶ್ವ ಸುಂದರಿ ಐಶ್ವರ್ಯ ರೈ, ಪ್ರೇಮಂ ಬೆಡಗಿ ಸಾಯಿ ಪಲ್ಲವಿ, ಬಾಹುಬಲಿ ಸುಂದರಿ ಅನುಷ್ಕಾ ಶೆಟ್ಟಿ ಹೀಗೆ ಸಾಕಷ್ಟು ಸ್ಟಾರ್ ನಟಿಯರ ಹೆಸರು ಕೇಳಿಬಂತು. ಆದರೆ ಇದೀಗ ರಾಬರ್ಟ್ ಟೀಮ್ನಲ್ಲಿ ತೆಲುಗು ನಟಿ ಮೆಹರೀನ್ ಪಿರ್ಜಾದ ಹೆಸರು ಕೇಳಿ ಬರುತ್ತಿದೆ.
ಮೆಹರೀನ್, ಟಾಲಿವುಡ್ ಸೂಪರ್ಹಿಟ್ ಸಿನಿಮಾಗಳಾದ 'ಎಫ್ 2', 'ಕೃಷ್ಣಗಾಡಿ ವೀರ ಪ್ರೇಮಗಾಥ' ಹಾಗೂ ವಿಜಯ್ ದೇವರಕೊಂಡ ಅಭಿನಯದ 'ನೋಟಾ' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೀಗ ರಾಬರ್ಟ್ ಸಿನಿಮಾದಲ್ಲಿ ದರ್ಶನ್ಗೆ ನಾಯಕಿಯಾಗುವ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ದಚ್ಚು ಜೊತೆ ಮೆಹರೀನ್ ಡ್ಯೂಯೆಟ್ ಆಡುವುದು ಗ್ಯಾರಂಟಿ ಎನ್ನುತ್ತಿದೆ ಗಾಂಧಿನಗರ. ಮೆಹರೀನ್ ತೆಲುಗು ಮಾತ್ರವಲ್ಲ ತಮಿಳು ,ಹಿಂದಿ, ಪಂಜಾಬಿ ಭಾಷೆಗಳಲ್ಲಿ ನಟಿಸಿದ್ದು ಒಂದು ವೇಳೆ ರಾಬರ್ಟ್ ಸಿನಿಮಾಗಾಗಿ ಕನ್ನಡಕ್ಕೆ ಬಂದರೆ ಪಂಚ ಭಾಷೆಗಳಲ್ಲಿ ಅಭಿನಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.