ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ 'ಆಕ್ಟ್ 1978' ಸಿನಿಮಾ ಸಕ್ಸಸ್ ಬಳಿಕ '19.20.21' ಎಂಬ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರ. ಪ್ರತಿ ಪ್ರಯತ್ನದಲ್ಲೂ ಭಿನ್ನವಾದ ಸಿನಿಮಾಗಳನ್ನು ಮಾಡ್ತಾ ಇರೋ ನಿರ್ದೇಶಕ ಮಂಸೋರೆ ಅಂಕಿಗಳನ್ನು ಟೈಟಲ್ ಆಗಿ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವುದು ಕುತೂಹಲ ಹುಟ್ಟಿಸಿದೆ.
ಸದ್ಯ 19.20.21 ಎಂಬ ಶೀರ್ಷಿಕೆ ಹೊಂದಿರುವ ಈ ಚಿತ್ರದ ಮುಹೂರ್ತ ಸದ್ದಿಲ್ಲದೇ ಜಯನಗರದ ಗಣೇಶ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ಈ ಪೂಜೆಯಲ್ಲಿ ನಿರ್ದೇಶಕ ಮಂಸೋರೆ, ಕಲಾವಿದರಾದ ಶೃಂಗಾ, ಕೃಷ್ಣಾ ಹೆಬ್ಬಾಳೆ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್, ಕ್ಯಾಮರಾಮ್ಯಾನ್ ಸತ್ಯ ಹೆಗಡೆ, ಸಂಭಾಷಣೆಕಾರ ವೀರಣ್ಣ ಮಲ್ಲಣ್ಣ, ನಿರ್ಮಾಪಕ ದೇವರಾಜ್ ಹಾಗೂ ಚಿತ್ರತಂಡದ ಸಮ್ಮುಖದಲ್ಲಿ ಈ ಸಿನಿಮಾ ಸೆಟ್ಟೇರಿದೆ.
ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಎಂಬುದು ವಿಶೇಷ. ಈ ಸಿನೆಮಾದ ಪ್ರಮುಖ ಪಾತ್ರದಲ್ಲಿ ಶೃಂಗಾ, ಕೃಷ್ಣಾ ಹೆಬ್ಬಾಳೆ, ಬಾಲಾಜಿ ಮನೋಹರ್, ಸಂಪತ್ ಕುಮಾರ್, ವೆಂಕಟೇಶ್ ಪ್ರಸಾದ್ ಹಾಗೂ ಸಿನೆಮಾ ಮತ್ತು ರಂಗಭೂಮಿಯ ಹಲವು ನಟರು ನಟಿಸುತ್ತಿದ್ದಾರೆ. ಈ ಸಿನೆಮಾದ ಚಿತ್ರೀಕರಣವನ್ನು ಧಾರವಾಡ, ಯಲ್ಲಾಪುರ, ಕರಾವಳಿಯ ಪ್ರಮುಖ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲು ಯೋಜಿಸಿದೆ. ಈ ಹಿಂದೆ 'ಆಕ್ಟ್-1978' ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರಾದ ದೇವರಾಜ್ ಆರ್. ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಕಾಜಲ್ ಅಗರ್ವಾಲ್..