ಬೆಂಗಳೂರು: ಹಾಸ್ಯ ನಟ ಕುರಿ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿದ್ದುಕೊಂಡೇ ಹಾಫ್ ಸೆಂಚುರಿ ಬಾರಿಸಿದ್ದಾರೆ. ಇದೇನಪ್ಪಾ ಅಂತ ಕನ್ಫ್ಯೂಸ್ ಆಗ್ಬೇಡಿ. ನಟ ಕುರಿ ಪ್ರತಾಪ್, ಚಿಕ್ಕಣ್ಣ, ತಬಲಾ ನಾಣಿ, ರವಿಶಂಕರ್ ಗೌಡ, ಗಿರಿ, ಕಾರುಣ್ಯ ರಾಮ್, ಶೃತಿ ಹರಿಹರನ್ ಅಭಿನಯದ ಮನೆ ಮಾರಾಟಕ್ಕಿದೆ ಚಿತ್ರ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿದ್ದು, 75ನೇ ದಿನದತ್ತ ದಾಪುಗಾಲು ಇಟ್ಟಿದೆ. ಇನ್ನು ಇದೇ ಖುಷಿಯಲ್ಲಿ ಚಿತ್ರತಂಡ ಚಿತ್ರದಲ್ಲಿ ನಟಿಸಿದ ಹಾಗೂ ಕೆಲಸ ಮಾಡಿದ ತಂತ್ರಜ್ಞರಿಗೆ ನೆನಪಿನ ಕಾಣಿಕೆ ಕೊಟ್ಟು ಸಂಭ್ರಮಿಸಿದೆ.
ಹೌದು, ಹಾಸ್ಯವೇ ಪ್ರಧಾನವಾಗಿರುವ ಎಸ್.ವಿ.ಬಾಬು ನಿರ್ಮಾಣ ಮಾಡಿ, ಮಂಜು ಸ್ವರಾಜ್ ನಿರ್ದೇಶಿಸಿರುವ 'ಮನೆ ಮಾರಾಟಕ್ಕಿದೆ' ಚಿತ್ರ ವರ್ಷದ ಆರಂಭದಲ್ಲಿ ಆಫ್ ಸೆಂಚುರಿ ಬಾರಿಸಿದೆ. ಈ ಚಿತ್ರ ಬಿಡುಗಡೆಯಾದ ವೇಳೆ ಸುಮಾರು 80 ಚಿತ್ರಗಳು ಬಿಡುಗಡೆಯಾಗಿದ್ದವು. ಆದರೂ ಕನ್ನಡ ಹಾಗೂ ಪರಭಾಷಾ ಚಿತ್ರಗಳ ಸವಾಲನ್ನು ಮೆಟ್ಟಿನಿಂತು ಮನೆ ಮಾರಾಟಕ್ಕಿದೆ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ.
ದೊಡ್ಡ ದೊಡ್ಡ ಚಿತ್ರಗಳ ಬಿಡುಗಡೆ ವೇಳೆ ನಮ್ಮ ಚಿತ್ರವನ್ನು ಥಿಯೇಟರ್ಗಳಲ್ಲಿ ಉಳಿಸಿಕೊಳ್ಳುವುದು ದೊಡ್ಡ ಚಾಲೆಂಜ್ ಆಗಿರುತ್ತೆ. ಇಷ್ಟು ದೊಡ್ಡ ಚಾಲೆಂಜಿಂಗ್ ನಡುವೆ ನಮ್ಮ ಚಿತ್ರ 50 ದಿನಗಳನ್ನು ಪೂರೈಸಿದ್ದು, ಈ ವರ್ಷದ ಮೊದಲ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ನಮ್ಮ ಚಿತ್ರವನ್ನು ನೋಡಿ ಹರಸಿದ ಪ್ರೇಕ್ಷಕ ಪ್ರಭುಗಳಿಗೆ ನಾವು ಚಿರಋಣಿಯಾಗಿರುತ್ತೇನೆ ಎಂದು ಚಿತ್ರತಂಡ ಕನ್ನಡ ಸಿನಿ ರಸಿಕರಿಗೆ ಧನ್ಯವಾದ ಹೇಳಿದೆ.
ಸದ್ಯ ನಮ್ಮ ಚಿತ್ರ 50 ದಿನಗಳನ್ನು ಪೂರೈಸಿದ್ದು, 75ನೇ ದಿನದತ್ತ ದಾಪುಗಾಲಿಟ್ಟಿದೆ. ಖಂಡಿತಾ ನಮ್ಮ ಚಿತ್ರ ನೂರು ದಿನಗಳನ್ನು ಪೂರೈಸಲಿದೆ ಎಂದು ಚಿತ್ರತಂಡ ಸಂತಸ ಹಂಚಿಕೊಂಡಿದೆ.