ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ಮೂಡಿ ಬರುತ್ತಿರುವ ಹಾಸ್ಯ ಕಾರ್ಯಕ್ರಮ 'ಮಜಾಭಾರತ ಸೀಸನ್ 3' ಯಶಸ್ವಿಯಾಗಿ 250 ಸಂಚಿಕೆ ಪೂರೈಸಿದೆ. ಕನ್ನಡದ ಜನಪ್ರಿಯ ಹಾಸ್ಯ ಕಾರ್ಯಕ್ರಮಗಳ ಪಾಲಿಗೆ ಸೇರಿದ ಮಜಾಭಾರತದಲ್ಲಿ ವೀಕ್ಷಕರಿಗೆ ಹಾಸ್ಯದ ಮೂಲಕ ಮನರಂಜನೆಯ ಮಹಾಪೂರವೇ ಸಿಗುತ್ತಿದೆ.
ಪ್ರತಿದಿನವೂ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಕಲಾವಿದರುಗಳ ಅಭಿನಯಕ್ಕೆ ಮನಸೋಲದವರಿಲ್ಲ. ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಸಂಗೀತ ಮಾಂತ್ರಿಕ ಗುರುಕಿರಣ್ ತೀರ್ಪುಗಾರರಾಗಿ ಕಾಣಿಸಿಕೊಂಡಿರುವ ಈ ಶೋಗೆ ನಿರೂಪಣೆಯನ್ನು ಕಿರುತೆರೆಯ ಅಕ್ಕ ಖ್ಯಾತಿಯ ಅನುಪಮಾ ಗೌಡ ಮಾಡುತ್ತಿದ್ದರು.
ಇದೀಗ ಸಿನಿಮಾ ಮತ್ತು ನಿರೂಪಣೆಯನ್ನು ಏಕ ಕಾಲದಲ್ಲಿ ನಿಭಾಯಿಸಲು ಸಾಧ್ಯವಾಗದ ಕಾರಣ ಮಜಾಭಾರತದ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಅವರ ಸ್ಥಾನದಲ್ಲಿ ಆರ್ ಜೆ ಸಿರಿ ಮತ್ತು ನಿರಂಜನ್ ದೇಶಪಾಂಡೆ ಮಿಂಚುತ್ತಿದ್ದಾರೆ.
ಉಳಿದಂತೆ ಚಂದನವನದ ಮೇರು ಕಲಾವಿದರುಗಳಾದ ಅನಂತ್ ನಾಗ್, ದ್ವಾರಕೀಶ್, ಉಮಾಶ್ರೀ, ರಾಘವೇಂದ್ರ ರಾಜ್ ಕುಮಾರ್, ತಾರಾ, ಸರಿಗಮ ವಿಜಿ, ಉಮೇಶ್, ಬುಲೆಟ್ ಪ್ರಕಾಶ್, ಸುಮನ್ ಅರ್ಗಕರ್, ವಿನೋದ್ ಪ್ರಭಾಕರ್ ಮತ್ತು ಪಿ ಶೇಷಾದ್ರಿ ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿದ್ರು.