ನಟ, ನಿರ್ಮಾಪಕ ಮದನ್ ಪಟೇಲ್ ಬಹಳ ವರ್ಷಗಳ ಗ್ಯಾಪ್ ನಂತರ ಗಾಂಧಿನಗರಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಅದೂ ಕೂಡಾ ಮಗ ಮಯೂರ್ ಪಟೇಲ್ ಜೊತೆ ತಮಟೆ ಬಾರಿಸಿಕೊಂಡು ಬಂದಿದ್ದಾರೆ. 'ತಮಟೆ' ಚಿತ್ರದಲ್ಲಿ ಮದನ್ ಪಟೇಲ್ ನಟಿಸುತ್ತಿದ್ದು ಇಂದು ಚಿತ್ರದ ಮುಹೂರ್ತ ನೆರವೇರಿದೆ.
ನಗರದ ಕಂಠೀರವ ಸ್ಟುಡಿಯೋನಲ್ಲಿ ಈ ಚಿತ್ರ ಇಂದು ಸೆಟ್ಟೇರಿದೆ. ಇಂದಿನಿಂದ ಚಿತ್ರದ ಶೂಟಿಂಗ್ ಕೂಡಾ ಆರಂಭವಾಗಿದೆ. 2016ರಲ್ಲಿ ಮದನ್ ಪಟೇಲ್ ಅವರೇ ಬರೆದಿದ್ದ 'ತಮಟೆ' ಎಂಬ ಕಾದಂಬರಿಯನ್ನೇ ಈಗ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರವನ್ನು ನಟ ಮಯೂರ್ ಪಟೇಲ್ ನಿರ್ದೇಶನ ಮಾಡುತ್ತಿರುವುದು ವಿಶೇಷ. ಮಗನ ನಿರ್ದೇಶನದಲ್ಲಿ ಅಪ್ಪ ನಾಯಕನಾಗಿ ನಟಿಸುತ್ತಿರುವುದು ಮತ್ತೊಂದು ವಿಶೇಷ. ಈ ಚಿತ್ರವು 'ತಮಟೆ' ಬಾರಿಸುವ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಕಥೆ ಒಳಗೊಂಡಿದೆ. ಒಂದು ತಮಟೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದ ಮುನಿಯ ಎಂಬ ವ್ಯಕ್ತಿ ಅಚಾನಕ್ಕಾಗಿ ತಮಟೆಯನ್ನು ಕಳೆದುಕೊಂಡು ಏನೆಲ್ಲಾ ಯಾತನೆ ಅನುಭವಿಸುತ್ತಾನೆ. ಮತ್ತು ಆ ತಮಟೆಯನ್ನು ಮತ್ತೆ ಮರಳಿ ಹೇಗೆ ಪಡೆಯುತ್ತಾನೆ ಎಂಬುದು ಚಿತ್ರದ ಕಥೆ.
ಮದನ್ ಪಟೇಲ್ ಜೊತೆಗೆ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಐಶ್ವರ್ಯ ನಟಿಸುತ್ತಿದ್ದಾರೆ. ಈ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಇಂದಿನಿಂದ ಎರಡು ದಿನಗಳು ಬೆಂಗಳೂರಿನಲ್ಲಿ ಚಿತ್ರದ ಶೂಟಿಂಗ್ ಇದ್ದು ಕೋಲಾರ, ಬಂಗಾರಪೇಟೆ, ಮಾಲೂರು ಸುತ್ತಮುತ್ತ ಸುಮಾರು 50 ದಿನಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಇದೊಂದು ಕಲಾತ್ಮಕ ಚಿತ್ರವಾಗಿದ್ದು ಇಲ್ಲಿ ಯಾವುದೇ ಕಮರ್ಷಿಯಲ್ ಎಲಿಮೆಂಟ್ ಕಡೆ ಗಮನ ಹರಿಸಿಲ್ಲ ಎಂದು ನಿರ್ದೇಶಕ ಮಯೂರ್ ಪಟೇಲ್ ಹೇಳಿದ್ದಾರೆ.