ಸೆಪ್ಟೆಂಬರ್ 18, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಜನ್ಮದಿನ. ಪ್ರತಿಬಾರಿಯಂತೆ ಈ ಬಾರಿ ಅಭಿಮಾನಿಗಳು ಡಾ. ವಿಷ್ಣುವರ್ಧನ್ 70 ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಮೊನ್ನೆಯಷ್ಟೇ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೂಡಾ ದೊರೆತಿದೆ.
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬದ ಸಂಭ್ರಮ ಆರಂಭವಾಗಿದೆ. 'ನಾ ಕಂಡಂತೆ ವಿಷ್ಣು' ಎಂಬ ಸವಾಲನ್ನು ಸ್ವೀಕರಿಸಿ ಅವರ ಬಗ್ಗೆ ಬರೆಯಲಾಗುತ್ತಿದೆ. ಇತ್ತೀಚೆಗೆ ನಟ, ನಿರ್ದೇಶಕ, ಬರಹಗಾರ ನವೀನ್ ಕೃಷ್ಣ ಡಾ. ವಿಷ್ಣುವರ್ಧನ್ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಗೀತಸಾಹಿತಿ, ನಟ, ಸಂಗೀತ ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ್ ಕೂಡಾ ಡಾ. ವಿಷ್ಣು ಸೇನಾಸಮಿತಿ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ನೀಡಿದ ಚಾಲೆಂಜ್ ಸ್ವೀಕರಿಸಿ ಸಾಹಸಸಿಂಹನ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
'ವಿಷ್ಣು ಸರ್ ಹಾಗೂ ಅವರೊಂದಿಗಿನ ಒಡನಾಟದ ಕುರಿತು ನಾಲ್ಕು ಮಾತು ಬರೆದು ಪೋಸ್ಟ್ ಮಾಡುವ ಚಾಲೆಂಜನ್ನು ವೀರಕಪುತ್ರ ಶ್ರೀನಿವಾಸ್ ನೀಡಿದ್ದಾರೆ. ಅನೇಕರು ವಿಶಿಷ್ಠ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಬರೆಯಲು ಸಾಕಷ್ಟಿದೆ. ಅವರ ಬಗ್ಗೆ ನಾವೆಲ್ಲಾ ಏನು ಬಲ್ಲೆವು ಎಂಬುದನ್ನು ಬರೆಯಲು ಸಂಪುಟಗಳು ಸಾಲವು. ಆದರೆ ಸ್ವತಃ ಅವರ ಅಣ್ಣ ರವಿಯವರು ನನಗೆ ಹೇಳಿದ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ರಿಂಗಣಿಸುತ್ತವೆ.
ಅವರು ನಮ್ಮೊಂದಿಗೆ ಇಲ್ಲವಾದ ತಿಂಗಳ ನಂತರ ರಾಮನಗರದ ಅಭಿಮಾನಿಗಳು ನಡೆಸಿದ ಶ್ರದ್ಧಾಂಜಲಿ ಸಭೆಗೆ ಹೋಗಿದ್ದೆ.ಕಾರ್ಯಕ್ರಮ ಮುಗಿಸಿ ಹೊರಡುವಾಗ ರವಿಯವರು ಕಾರು ಹತ್ತುತ್ತಿದ್ದರು. ನಂಬರ್ ಪ್ಲೇಟ್ ಗಮನಿಸಿದೆ. ಅದು ರಾಮನಗರದ್ದೇ ಆದ ಆಯೋಜಕರ ಕಾರು. ರವಿಯವರನ್ನು ಅವರ ಬೆಂಗಳೂರಿನ ಮನೆಗೆ ಬಿಟ್ಟು ಮತ್ತೆ ರಾಮನಗರಕ್ಕೆ ಆಯೋಜಕರು ವಾಪಸಾಗುತ್ತಾರೆ. ಥಟ್ಟನೆ ರವಿಯವರನ್ನು ನಾನು ಡ್ರಾಪ್ ಮಾಡುತ್ತೇನೆ ಎಂದು ವಿನಂತಿಸಿದೆ. ರವಿಯವರೂ ಕೂಡಾ ಸಮ್ಮತಿಸಿದರು. ಇಬ್ಬರೂ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ವಿಷ್ಣು ಅವರ ಬಾಲ್ಯ, ಕಾಲೇಜು ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾ ಬಂದೆ. ಅವರೂ ಸಮಾಧಾನವಾಗಿ ಉತ್ತರಿಸಿದರು. ಅವರ ಮನೆ ಮುಂದೆ ಕಾರು ನಿಂತಿತು.
ನಾನು ಕೊನೆಯದಾಗಿ ಕೇಳಿದ ಪ್ರಶ್ನೆ.. ಸಾರ್, ವಿಷ್ಣು ಸರ್ ಬಗ್ಗೆ ಈಗ ಏನು ಅನಿಸುತ್ತೆ? ಕಾರ್ ಇಳಿಯುತ್ತಾ ಗದ್ಗದಿತರಾಗಿ ನನ್ನ ಕೈ ಹಿಡಿದು "ನನ್ನ ತಮ್ಮ ಇಷ್ಟು ದೊಡ್ಡ ಹೀರೋ ಅಂತ ನನಗೆ ಗೊತ್ತೇ ಇರಲಿಲ್ಲ ಪ್ರಸಾದ್ ಅವರೇ, ಇಷ್ಟೊಂದು ಜನ ಅವನನ್ನು ದೇವರ ಹಾಗೆ ಆರಾಧನೆ ಮಾಡ್ತಾರೆ ಅಂತ ಅವನು ಹೋದ ಮೇಲೇನೇ ಗೊತ್ತಾಗಿದ್ದು. ಅವನು ಇನ್ನೂ ಇರಬೇಕಿತ್ತು" ಎಂದು ಉತ್ತರಿಸಿದರು.
ಹೌದು, ಅವರು ಇನ್ನೂ ಇರಬೇಕಿತ್ತು.ಇದ್ದಾರೆ ಎಂಬ ಭ್ರಮೆಯ ಸುಖವೂ ಆತ್ಮಾನಂದ. ಲವ್ ಯು ವಿಷ್ಣು ದಾದಾ' ಎಂದು ಡಾ.ವಿ. ನಾಗೇಂದ್ರ ಪ್ರಸಾದ್ ಡಾ. ವಿಷ್ಣುವರ್ಧನ್ ಬಗ್ಗೆ ಬರೆದುಕೊಂಡಿದ್ದಾರೆ.