ಸ್ಯಾಂಡಲ್ವುಡ್ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಸಿನಿಮಾ ಕೆಜಿಎಫ್. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆಯಾದ ಕೆಜಿಎಫ್ ಪಾಕಿಸ್ತಾನದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ ಎಂಬ ದಾಖಲೆ ಕೂಡಾ ಮಾಡಿದೆ.
ಕೆಜಿಎಫ್-2 ಶೂಟಿಂಗ್ ಕೂಡಾ ಈಗಾಗಲೇ ಆರಂಭವಾಗಿದ್ದು ಚಿತ್ರತಂಡ ಹೊಸ ಪ್ರತಿಭೆಗಳಿಗೆ ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದೆ. ಕೆಲವು ದಿನಗಳ ಹಿಂದೆ ಹೊಂಬಾಳೆ ಫಿಲಮ್ಸ್ ತನ್ನ ಟ್ವಿಟರ್ನಲ್ಲಿ ಕೆಜಿಎಫ್ 2ಕ್ಕೆ ಹೊಸ ಪ್ರತಿಭೆಗಳು ಬೇಕಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದೇ ತಡ ಎಲ್ಲರೂ ಅಲರ್ಟ್ ಆದರು. ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಆಡಿಷನ್ ನಡೆದಿದೆ. ಈ ಆಡಿಷನ್ಗೆ ಜನಸಾಗರವೇ ಹರಿದುಬಂದಿತ್ತು. ಪೊಲೀಸರಿಗಂತೂ ಜನರನ್ನು ಕಂಟ್ರೋಲ್ ಮಾಡುವುದೇ ದೊಡ್ಡ ಕೆಲಸವಾಗಿತ್ತು.
ಬೆಳಗ್ಗೆ 8 ರಿಂದಲೇ ಚಿತ್ರದ ಆಡಿಷನ್ ಶುರುವಾಗಿದ್ದು, ಸಂಜೆ ಆರು ಗಂಟೆಯವರೆಗೂ ನಡೆಯಲಿದೆ. ಚಿತ್ರದಲ್ಲಿ ನಟಿಸಲು ಅವಕಾಶ ಗಿಟ್ಟಿಸುವ ಆಸೆಯಿಂದ ಸಾಕಷ್ಟು ಪ್ರತಿಭೆಗಳು ಬೆಳಗ್ಗಿನಿಂದಲೇ ಸಾಲಿನಲ್ಲಿ ನಿಂತಿದ್ದು ಕಂಡುಬಂತು. ಆಡಿಷನ್ಗೆ 8-16 ವರ್ಷದ ಮಕ್ಕಳು ಕೂಡಾ ಉತ್ಸಾಹದಿಂದ ಭಾಗವಹಿಸಿದ್ದರು. ಪೋಷಕರು ಕೂಡಾ ಮಕ್ಕಳನ್ನು ಆಡಿಷನ್ಗೆ ಕರೆತಂದು ಹುರಿದುಂಬಿಸುತ್ತಿದ್ದರು. ನಿಗದಿಪಡಿಸಿದ 30 ಸೆಕೆಂಡ್ ಡೈಲಾಗನ್ನು ಹೇಳಲು ಆಡಿಷನ್ನಲ್ಲಿ ಭಾಗವಹಿಸಿದ್ದವರಿಗೆ ಚಿತ್ರತಂಡ ನೀಡಿತ್ತು. ತಮಗೆ ನೀಡಿದ ಡೈಲಾಗನ್ನು ಕೆಲವರು ಪಟಪಟ ಹೇಳಿದರೆ ಮತ್ತೆ ಕೆಲವರು ಡೈಲಾಗ್ ಹೇಳಲು ಕಷ್ಟಪಟ್ಟಿದ್ದಾರೆ.
ಇನ್ನು ಆಫ್ರಿಕಾದ ರ್‍ಯಾಂಬೋ ಎಂಬುವವರು ಕೂಡಾ ಆಡಿಷನ್ಗೆ ಬಂದಿದ್ದು ಕೆಜಿಎಫ್-2 ರಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ 'ನಾಗರಹಾವು' ಚಿತ್ರದ ಜಲೀಲ ಡೈಲಾಗನ್ನು ರ್‍ಯಾಂಬೋ ಸರಾಗವಾಗಿ ಹೇಳಿದ್ದು ಎಲ್ಲರಿಗೂ ಆಶ್ಚರ್ಯವಾಯ್ತು. ಕೆಜಿಎಫ್-2 ಶೂಟಿಂಗ್ ಮುಗಿಸುವ ಮುನ್ನವೇ ಹವಾ ಶುರುವಾಗಿದ್ದು ಇನ್ನು ಸಿನಿಮಾ ಯಾವ ರೀತಿ ಸುನಾಮಿ ಎಬ್ಬಿಸುವುದೋ ಚಿತ್ರ ಬಿಡುಗಡೆವರೆಗೂ ಕಾದು ನೋಡಬೇಕು.