ಜಿಂಕೆ ಮರೀನಾ…ಜಿಂಕೆ ಮರೀನಾ ಎನ್ನುತ್ತಾ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತ ಸ್ಯಾಂಡಲ್ವುಡ್ನಲ್ಲಿ ತನ್ನದೇ ಸ್ಟಾರ್ ಡಮ್ ಪಡೆದ ನಟ ಲೂಸ್ ಮಾದ ಯೋಗೇಶ್. ಸದ್ಯ ಲಂಕೆ, ಪರಿಮಳ ಲಾಡ್ಜ್ ಸೇರಿದಂತೆ 4-5 ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.
ಇಂದು ಜನ್ಮದಿನದ ಸಂಭ್ರಮದಲ್ಲಿರುವ ಲೂಸ್ ಮಾದ ಯೋಗಿ, ಈ ವರ್ಷ ಕೊರೊನಾದಿಂದಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
32ನೇ ವಸಂತಕ್ಕೆ ಕಾಲಿಟ್ಟಿರೋ ಲೂಸ್ ಮಾದ ಯೋಗಿ, ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಇಂಟ್ರೆಸ್ಟಿಂಗ್. 2007ರಲ್ಲಿ ದುನಿಯಾ ಸಿನಿಮಾಲ್ಲಿ, ಸಣ್ಣ ಪಾತ್ರ ಮಾಡುವ ಮೂಲಕ, ಚಿತ್ರರಂಗಕ್ಕೆ ಬಂದ ಯೋಗೀ ಸ್ವತಃ ಹೀರೋ ಆಗ್ತೀನಿ ಅಂತಾ ಅಂದುಕೊಂಡಿರಲಿಲ್ಲ.
2008ರಲ್ಲಿ ನಂದಾ ಲವ್ಸ್ ನಂದಿತಾ ಸಿನಿಮಾ ಮೂಲಕ, ಪೂರ್ಣ ಪ್ರಮಾಣದ ಹೀರೋ ಆಗಿ ಚೊಚ್ಚಲ ಚಿತ್ರದಲ್ಲಿ ಸಕ್ಸಸ್ ಕಂಡು ಸ್ಟಾರ್ ಆಗಿಬಿಡುತ್ತಾರೆ. ಈ ಚಿತ್ರದ ಬಳಿಕ ಯೋಗಿ, ರಾವಣ, ಪುಂಡ, ಪ್ರೀತ್ಸೆ ಪ್ರೀತ್ಸೆ, ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸಿದರು. ಬಳಿಕ ಅಂಬಾರಿ ಸಿನಿಮಾ ಲೂಸ್ ಮಾದ ಯೋಗಿಗೆ ದೊಡ್ಡ ಸ್ಟಾರ್ ಪಟ್ಟ ತಂದು ಕೊಟ್ಟರೆ, ಈ ಸಿನಿಮಾದ ನಟನೆಗಾಗಿ 2010ರಲ್ಲಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ದೊರಕಿತು.
ಅಲ್ಲಿಂದ ಯೋಗಿ ಹುಡುಗರು, ಧೂಳ್, ಸಿದ್ಲಿಂಗು, ಅಲೆಮಾರಿ, ಯಾರೇ ಕೂಗಾಡಲಿ ಸೇರಿ 31ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿರುವ ಯೋಗಿ ತಮ್ಮ ಸಿನಿಮಾ ಜರ್ನಿಯಲ್ಲಿ ಸಕ್ಸಸ್ ಜೊತೆಗೆ ಫೆಲ್ಯೂರ್ಗಳನ್ನ ನೋಡಿದ್ದಾರೆ. ಈ ಸಮಯಲ್ಲಿ 2017ರಲ್ಲಿ ಬಾಲ್ಯದ ಗೆಳತಿ ಸಾಹಿತ್ಯ ಜೊತೆ ಯೋಗಿ ಸಪ್ತಪದಿ ತುಳಿದರು.
ಸದ್ಯ ಯೋಗಿ ಒಂಬತ್ತನೇ ದಿಕ್ಕು, ಲಂಕೆ, ಪರಿಮಳ ಲಾಡ್ಜ್ , ನಾನು ಮತ್ತು ಅದು ಸರೋಜಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಗಳ ಟೀಸರ್ ಹಾಗೂ ಹೊಸ ಪೋಸ್ಟರ್ ಅನಾವರಣ ಮಾಡುವ ಮೂಲಕ ಲೂಸ್ ಮಾದ ಯೋಗಿಗೆ ಜನ್ಮದಿನಕ್ಕೆ ಗಿಫ್ಟ್ ನೀಡಲು ಚಿತ್ರತಂಡಗಳು ಪ್ಲಾನ್ ಮಾಡಿವೆ.