ಮುಂಬೈ(ಮಹಾರಾಷ್ಟ್ರ): ಕೋವಿಡ್ ಸೋಂಕಿಗೊಳಗಾಗಿ ಕಳೆದ ಕೆಲ ವಾರಗಳಿಂದ ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮತ್ತೊಮ್ಮೆ ಮಾಹಿತಿ ಹಂಚಿಕೊಂಡಿದ್ದಾರೆ.
ಕ್ವೀನ್ ಆಫ್ ಮೆಲೋಡಿ ಎಂದು ಕರೆಯಿಸಿಕೊಳ್ಳುವ ಲತಾ ಮಂಗೇಶ್ಕರ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ ಎಂಬ ಮಾಹಿತಿ ಹರಿದಾಡಲು ಶುರುವಾಗುತ್ತಿದ್ದಂತೆ ಮಾಹಿತಿ ಹಂಚಿಕೊಂಡಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು, ಗೊಂದಲಗಳಿಗೆ ಕಿವಿಗೊಡಬೇಡಿ, ಅವರ ಆರೋಗ್ಯದಲ್ಲಿ ಸ್ಥಿರತೆ ಇದ್ದು, ಐಸಿಯುನಲ್ಲೇ ಚಿಕಿತ್ಸೆ ಮುಂದುವರೆದಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿರಿ: ಮತ್ತಷ್ಟು ಹದಗೆಟ್ಟ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ: ಐಸಿಯುನಲ್ಲಿ ಚಿಕಿತ್ಸೆ
ಜನವರಿ 9ರಂದು ಕೋವಿಡ್ ದೃಢಪಟ್ಟ ಹಿನ್ನೆಲೆ ಲತಾ ಮಂಗೇಶ್ಕರ್ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯ ಸುಧಾರಿಸಿದ ಹಿನ್ನೆಲೆ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್ ಅನ್ನು ಹಿಂದಿನ ವಾರವಷ್ಟೇ ತೆಗೆದು ಹಾಕಲಾಗಿತ್ತು. ಇದರ ಬೆನ್ನಲ್ಲೇ ಅವರ ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಕಂಡು ಬಂದಿದೆ ಎಂಬ ಸುದ್ದಿ ಹಬ್ಬಿತ್ತು. ಇದಕ್ಕೆ ಆಸ್ಪತ್ರೆಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
92 ವರ್ಷದ ಪ್ರಖ್ಯಾತ ಗಾಯಕಿ 70ರ ದಶಕದಲ್ಲಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ರೀತಿಯ ವಿಶಿಷ್ಟ ಚಾಪು ಮೂಡಿಸಿದ್ದರು. ಇವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಇಲ್ಲಿಯವರೆಗೆ ಇವರು 30 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ.