ಸ್ಯಾಂಡಲ್ವುಡ್ಗೆ ರಾಜಕಾರಣಿಗಳ ಮಕ್ಕಳು ಬರೋದು ಕಾಮನ್ ಆಗಿದೆ. ಈಗಾಗಲೇ ಹೆಚ್.ಡಿ. ಕುಮಾರಸ್ವಾಮಿ, ರೇವಣ್ಣ, ಚೆಲುವರಾಯಸ್ವಾಮಿ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಜೈದ್ ಖಾನ್, ಬೆಲ್ ಬಾಟಂ ಖ್ಯಾತಿಯ ನಿರ್ದೇಶಕ ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಅನೇಕ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಬನಾರಸ್ ಚಿತ್ರದ ಆಡಿಯೋ-ವಿಡಿಯೋ ಹಕ್ಕುಗಳು ಕನ್ನಡದ ಪ್ರತಿಷ್ಠಿತ ಆಡಿಯೋ ಸಂಸ್ಥೆ ಲಹರಿ ಪಾಲಾಗಿವೆ.
ಈ ಚಿತ್ರವು ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಬರುತ್ತಿದ್ದು, ಆ ಎಲ್ಲ ಭಾಷೆಯ ಆಡಿಯೋ ಮತ್ತು ವಿಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿದೆ. ಸದ್ಯಕ್ಕೆ ಎಷ್ಟು ಕೋಟಿಗೆ ಮಾರಾಟ ಆಗಿದೆ ಅನ್ನೋದನ್ನು ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಆದರೆ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತ ಎನ್ನುವಂತೆ ಲಹರಿ ಸಂಸ್ಥೆಯು ಯುವನಟನ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಈ ಕುರಿತು ಲಹರಿ ಸಂಸ್ಥೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸುದ್ದಿಯಲ್ಲಿರುವ ಬನಾರಸ್ ಚಿತ್ರದ ಆಡಿಯೋ, ವಿಡಿಯೋ ಹಕ್ಕುಗಳನ್ನು ಖರೀದಿಸಿದ್ದಕ್ಕೆ ಹೆಮ್ಮೆ ಇದೆ ಎಂದಿದೆ.
ಇದನ್ನೂ ಓದಿ: ಜೂನಿಯರ್ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ 7 ಪದಕ ಗೆದ್ದ ನಟ ಮಾಧವನ್ ಪುತ್ರ ವೇದಾಂತ್!
ಬನಾರಸ್ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಯ ಆಡಿಯೋ ಹಾಗೂ ವಿಡಿಯೋ ರೈಟ್ಸ್ ಅನ್ನು ನಾಲ್ಕುವರೆ ಕೋಟಿ ಕೊಟ್ಟು ಲಹರಿ ಹಾಗೂ ಟಿ-ಸೀರೀಸ್ ಜಂಟಿಯಾಗಿ ಖರೀದಿಸಿದೆ. ಹಿಂದೆಂದೂ ಕೂಡ ಎಲ್ಲ ಭಾಷೆಯ ಆಡಿಯೋ ಹಕ್ಕುಗಳ ರೈಟ್ಸ್ ಪಡೆದುಕೊಂಡಿರಲಿಲ್ಲ ಅಂತ ಗಾಂಧಿನಗರದಲ್ಲಿ ಹೇಳಲಾಗುತ್ತಿದೆ.