ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಪ್ರಸಾರ ಆರಂಭಿಸಿದ್ದ ಲಗ್ನಪತ್ರಿಕೆ ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಹೌದು, ಲಗ್ನಪತ್ರಿಕೆಯ ಕೊನೆಯ ಸಂಚಿಕೆಗಳು ಮುಂದಿನ ವಾರದಲ್ಲಿ ಪ್ರಸಾರವಾಗಲಿದ್ದು, ವಾರಾಂತ್ಯದಲ್ಲಿ ಧಾರಾವಾಹಿ ತನ್ನ ಪ್ರಸಾರ ನಿಲ್ಲಿಸಲಿದೆ. ಟಿಆರ್ಪಿ ಕಡಿಮೆ ಇರುವ ಕಾರಣದಿಂದ ಲಗ್ನಪತ್ರಿಕೆ ಮುಕ್ತಾಯಗೊಳ್ಳುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

ಟಿಆರ್ಪಿ ಕಡಿಮೆ ಇರುವ ಕಾರಣದಿಂದಾಗಿ ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೂರುಗಂಟು ಧಾರಾವಾಹಿ ಮುಕ್ತಾಯಗೊಂಡಿತು. ಇದೀಗ ಲಗ್ನಪತ್ರಿಕೆ ಸರತಿ. ಇದೇ ವರ್ಷ ಸೆಪ್ಟೆಂಬರ್ನಲ್ಲಿ ಪ್ರಸಾರ ಶುರು ಮಾಡಿದ್ದ ಲಗ್ನಪತ್ರಿಕೆ ಕೇವಲ ಎರಡು ತಿಂಗಳ ಅವಧಿಯಲ್ಲಿಯೇ ಮುಕ್ತಾಯಗೊಳ್ಳುತ್ತಿರುವುದು ಸೀರಿಯಲ್ ಪ್ರಿಯರ ಪಾಲಿಗೆ ನಿಜವಾಗಿಯೂ ಬೇಸರದ ಸಂಗತಿ.

ಲಗ್ನಪತ್ರಿಕೆಯ ಕಥಾ ಹಂದರವೇನು?
ನಾಯಕ ಶಶಾಂಕ್ ಹಾಗೂ ನಾಯಕಿ ಮಯೂರಿಗೆ ಮದುವೆ ಮಾಡಲು ಎರಡು ಮನೆಯವರು ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಶಶಾಂಕ್ ಹಾಗೂ ಮಯೂರಿ ಇವರಿಬ್ಬರಿಗೂ ಈ ಮದುವೆ ಇಷ್ಟವಿರುವುದೇ ಇಲ್ಲ. ಮನೆಯವರ ಒತ್ತಾಯಕ್ಕೆ ಮಣಿದು ಎಂಗೇಜ್ಮೆಂಟ್ ಮಾಡಿಕೊಳ್ಳುತ್ತೆ ಈ ಜೋಡಿ. ಆದರೆ ಏನೇ ಆದರೂ ಮದುವೆಯಾಗಬಾರದು. ಮದುವೆಯಾದರೆ ನಮ್ಮಲ್ಲಿ ಹೊಂದಾಣಿಕೆ ಕಷ್ಟ. ಜೀವನ ಸಾಗಿಸಲು ಅಸಾಧ್ಯ ಎಂದು ಅಂದುಕೊಳ್ಳುವ ಶಶಾಂಕ್ ಮತ್ತು ಮಯೂರಿ ಹೇಗಾದರೂ ಮಾಡಿ ಮದುವೆ ಮುರಿಯಬೇಕು ಎಂದು ಪ್ಲ್ಯಾನ್ ಮಾಡಿಕೊಳ್ಳುತ್ತಿರುತ್ತಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಒಂದಾಗಲಿದೆಯಾ? ಏನೆಲ್ಲಾ ಸಮಸ್ಯೆಗಳು ಎದುರಾಗಲಿವೆ ಎಂಬುದು 'ಲಗ್ನಪತ್ರಿಕೆ' ಧಾರಾವಾಹಿಯ ಒನ್‌ಲೈನ್ ಸ್ಟೋರಿ.

ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದರೆ, ಸಂಜಯ್ ಹೂಗಾರ್ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ರೇಣುಕಾ, ರವಿಭಟ್, ಮರೀನಾ ತಾರಾ, ಸುಂದರ್ ತಾರಾಗಣದಲ್ಲಿದ್ದಾರೆ. ಇನ್ನು ಧಾರಾವಾಹಿಯ ವಿಲನ್ ನಮಿತಾ ಆಗಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಬಣ್ಣ ಹಚ್ಚಿದ್ದಾರೆ.
