ಕನ್ನಡ ಚಿತ್ರರಂಗದಲ್ಲಿ ಪರಭಾಷೆಯ ಸ್ಟಾರ್ ನಟರು ಕನ್ನಡದ ಸಿನಿಮಾಗಳ ಪೋಸ್ಟರ್ ಹಾಗೂ ಟ್ರೇಲರ್ ಅನಾವರಣ ಮಾಡುವ ಟ್ರೆಂಡ್ ಹೆಚ್ಚಾಗುತ್ತಿದೆ. ಇದೀಗ ಯುವ ನಟ ಮಹೇಶ್ ಅಭಿನಯಿಸಿರೋ 'ಕ್ರಿಮಿನಲ್' ಸಿನಿಮಾದ, ಫಸ್ಟ್ ಲುಕ್ ಅನ್ನು ಕಾಲಿವುಡ್ ನಟ ಬಿಡುಗಡೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇತ್ತೀಚಿಗೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕರಾದ ಕಾಲೈಪುಲ್ಲಿ ಎಸ್ ತನು ಅವರಿಂದ ಚಿತ್ರತಂಡ ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿಸಿತ್ತು. ಇದೀಗ ಸೌತ್ ಸಿನಿ ದುನಿಯಾದ ಸ್ಟಾರ್ ನಟ ವಿಜಯ್ ಸೇತುಪತಿಯಿಂದ ’ಕ್ರಿಮಿನಲ್’ ಚಿತ್ರದ ಹೀರೋ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿಸಿದೆ.
ವಿಜಯ್ ಸೇತುಪತಿ ತಮ್ಮ ಟ್ವಿಟರ್ ಮೂಲಕ ಕ್ರಿಮಿನಲ್ ಚಿತ್ರದ ಹೀರೋ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಕ್ರಿಮಿನಲ್ ಬಿಡುಗಡೆಯಾಗಲು ಸಜ್ಜಾಗಿರುವ ಪ್ಯಾನ್ ಇಂಡಿಯಾ ಸಿನಿಮಾ. ಮಿಸ್ಟ್ರಿ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದಲ್ಲಿ ಮಹೇಶ್ ಹೀರೋ ಆಗಿ ಅಭಿನಯಿಸುತ್ತಿದ್ದಾರೆ.ಈ ಹಿಂದೆ ಐ ಆ್ಯಮ್ ಇನ್ ಲವ್ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿಕೊಟ್ಟಿದ್ದ ಮಹೇಶ್ಗೆ ಎರಡನೇ ಸಿನಿಮಾವಿದು.
ಕ್ರಿಮಿನಲ್ ಕಥೆ, ಚಿತ್ರಕಥೆ ಸಿನಿಮಾದಲ್ಲಿದ್ದು, ಆರ್ಮುಗಂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತಮಿಳು, ಮಲಯಾಳಂ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವ ಇರುವ ಇವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ಕಿರಣ್ ದೊರ್ನಾಲ ಕ್ಯಾಮೆರಾ ವರ್ಕ್, ಆಪಲ್ ಪೈನಾಪಲ್ ಸಂಗೀತ, ಪವನ್ ಗೌಡ ಸಂಕಲನ ಕ್ರಿಮಿನಲ್ ಚಿತ್ರಕ್ಕಿದೆ.
ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯವನ್ನು ಭರ್ಜರಿಯಾಗಿ ಆರಂಭಿಸಿದ್ದು, ಸದ್ಯದಲ್ಲೇ ಚಿತ್ರದ ಸ್ಪೆಷಲ್ ಪೋಸ್ಟರ್ ಒಂದನ್ನು ಸ್ಪೆಷಲ್ ಆಗಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ.
ಚಿತ್ರದಲ್ಲಿ ನಾಯಕಿಯರಾಗಿ ಜಾನ್ವಿ ಹಾಗೂ ಫೆಸ್ಸಿ ಮಹೇಶ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕಮಲ ಆರ್ಟ್ಸ್ ಬ್ಯಾನರ್ ನಡಿ ಕ್ರಿಮಿನಲ್ ಸಿನಿಮಾ ನಿರ್ಮಾಣವಾಗಿದ್ದು, ಡಿಸೆಂಬರ್ ಕೊನೆ ಅಥವಾ ಜನವರಿಯಲ್ಲಿ ಸಿನಿಮಾ ತೆರೆಗೆ ತರಲು ಚಿತ್ರತಂಡ ತಯಾರಾಗುತ್ತಿದೆ. ಸದ್ಯದಲ್ಲೇ ಚಿತ್ರತಂಡ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.