ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮತ್ತೆ ಉದ್ಭವ' ಸಿನಿಮಾ ಇದೇ ಶುಕ್ರವಾರ, ಅಂದರೆ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದೆ. ಇನ್ನು ಈ ಸಿನಿಮಾ ಬಿಡುಗಡೆಯಾದ ನಂತರ ನನಗೆ ಬೆದರಿಕೆ ಕರೆಗಳು ಬರುವುದು ಗ್ಯಾರಂಟಿ ಎಂದು ನಿರ್ದೇಶಕ ಕೋಡ್ಲು ರಾಮಕೃಷ್ಣ ಹೇಳಿಕೊಂಡಿದ್ದಾರೆ.
1990 ರಲ್ಲಿ ಅನಂತ್ನಾಗ್ ಅಭಿನಯದ 'ಉದ್ಭವ' ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಬರೋಬ್ಬರಿ 30 ವರ್ಷಗಳ ನಂತರ ಕೋಡ್ಲು ರಾಮಕೃಷ್ಣ 'ಉದ್ಭವ' ಚಿತ್ರದ ಸೀಕ್ವೆಲ್ 'ಮತ್ತೆ ಉದ್ಭವ' ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡ್ಲು ರಾಮಕೃಷ್ಣ, ಈ ಸಿನಿಮಾ ಬಿಡುಗಡೆಯಾದ ನಂತರ ರಾಜಕಾರಣಿಗಳು ಹಾಗೂ ಮಠಾಧೀಶರಿಂದ ನನಗೆ ಬೆದರಿಕೆ ಕರೆಗಳು ಬರುವುದು ಗ್ಯಾರಂಟಿ. ಒಂದು ವೇಳೆ ನಿಜಕ್ಕೂ ಬೆದರಿಕೆ ಕರೆ ಬಂದರೆ ನಾನು ಬಚ್ಚಿಟ್ಟುಕೊಳ್ಳಲು ಈಗಾಗಲೇ ಒಂದು ಅಜ್ಞಾತ ಸ್ಥಳವನ್ನು ಹುಡುಕಿಕೊಂಡಿದ್ದೀನಿ ಎಂದು ಹೇಳಿದರು. ರಾಮಕೃಷ್ಣ ಅವರು ಈ ಮಾತು ಹೇಳುತ್ತಿದ್ದಂತೆ ಅಲ್ಲಿದ್ದವರು ನಗಲು ಆರಂಭಿಸಿದರು. ಮುಂದುವರೆದು ಮಾತನಾಡಿದ ಅವರು, 'ಮತ್ತೆ ಉದ್ಭವ' ಚಿತ್ರದಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆ ಹಾಗೂ ಮಠಾಧಿಪತಿಗಳ ಕಥೆಯನ್ನು ತೋರಿಸಲಾಗಿದೆ. ಜೊತೆಗೆ ಈ ಚಿತ್ರದಲ್ಲಿ ಮೂರು ಮುಖ್ಯಮಂತ್ರಿಗಳ ಕಥೆ ಬಂದು ಹೋಗುತ್ತದೆ. ಹಾಗಾಗಿ ಈ ಸಿನಿಮಾ ಬಿಡುಗಡೆಯಾದಾಗ ನನಗೆ ಬೆದರಿಕೆ ಕರೆ ಬರುವುದು ಗ್ಯಾರಂಟಿ ಎಂದಿದ್ದಾರೆ.
![Matte udhbhava](https://etvbharatimages.akamaized.net/etvbharat/prod-images/5954989_matte.jpg)
1990 ರಲ್ಲಿ 'ಉದ್ಭವ' ಸಿನಿಮಾ ಬಿಡುಗಡೆ ಆದಾಗಲೂ ಆರ್ಎಸ್ಎಸ್ನವರು ನಮ್ಮ ಮನೆ ಮುಂದೆ ಜಮಾಯಿಸಿ ಚಿತ್ರದ ಹಾಡಿನ ಸಾಹಿತ್ಯ ಬದಲಿಸುವಂತೆ ನನಗೆ ಎಚ್ಚರಿಕೆ ನೀಡಿದ್ದರು. ಮೊದಲು ನಾನು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಆದರೆ ಎರಡನೇ ದಿನವೂ ಮತ್ತೆ ಬಂದು ಎಚ್ಚರಿಕೆ ನೀಡಿದಾಗ ನಾನು ತೀರ್ಥಹಳ್ಳಿ ಸೇರಿಕೊಂಡಿದ್ದೆ ಎಂದು ಹೇಳಿಕೊಂಡರು.