ಪಾಪ್ ದಿಗ್ಗಜ ಮೈಕೆಲ್ ಜಾಕ್ಸನ್ ಅವರ ಜೀವನಾಧಾರಿತ ಚಿತ್ರಕ್ಕೆ ವೇದಿಕೆ ಸಿದ್ಧಗೊಂಡಿದೆ. ಖ್ಯಾತ ಹಾಲಿವುಡ್ ನಿರ್ಮಾಪಕ, ಆಸ್ಕರ್ ಪ್ರಶಸ್ತಿ ವಿಜೇತ ಗ್ರಹಾಂ ಕಿಂಗ್ ಅವರು ಮೈಕೆಲ್ ಜಾಕ್ಸನ್ ಜೀವನವನ್ನು ತೆರೆಯ ಮೇಲೆ ಪ್ರದರ್ಶಿಸುವ ಮಹತ್ತರ ಯೋಜನೆಗೆ ಕೈ ಹಾಕಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಮೂರು ಬಾರಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಜಾನ್ ಲೋಗನ್ ಈ ಚಿತ್ರಕ್ಕೆ ಕಥೆ ಬರೆಯಲಿದ್ದಾರೆ. ಲಯನ್ಸ್‌ಗೇಟ್ ಎಂಬ ಸಂಸ್ಥೆಯು ವಿಶ್ವಾದ್ಯಂತ ಚಿತ್ರ ವಿತರಣೆ ಮಾಡುವ ಹೊಣೆ ಹೊತ್ತುಕೊಂಡಿದೆ ಎಂದು ಸ್ಟುಡಿಯೋದ ಅಧ್ಯಕ್ಷ ಜೋ ಡ್ರೇಕ್ ಹೇಳಿದ್ದಾರೆ.
ಚಿತ್ರದ ಟೈಟಲ್ ಕೂಡ ಫೈನಲ್ ಆಗಿದೆ. ‘ಮೈಕಲ್’ ಎಂಬ ಶೀರ್ಷಿಕೆಯೊಂದಿಗೇ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಮೈಕೆಲ್ ಜಾಕ್ಸನ್ ಅವರ ಸ್ವಂತ ಎಸ್ಟೇಟ್ ಸಹ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆಯಂತೆ.
ಇದನ್ನೂ ಓದಿ: ಹಿಜಾಬ್ ವಿವಾದ ಮುಗ್ಧ ವಿದ್ಯಾರ್ಥಿಗಳಲ್ಲಿ ಕೋಮು ವಿಭಜನೆ ಸೃಷ್ಟಿಸುತ್ತಿದೆ: ಕಮಲ್ ಹಾಸನ್
ಜಾಕ್ಸನ್ ಬಾಲ್ಯದಲ್ಲಿಯೇ ಪಾಪ್ ಗಾಯನ ಮತ್ತು ಅದ್ಭುತ ಡ್ಯಾನ್ಸ್ನಿಂದ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ್ದರು. ಅವರ ಸಾಧನೆಯ ಜೊತೆಗೆ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಗಂಭೀರ ಆರೋಪವೂ ಸೇರಿದಂತೆ ಅವರನ್ನು ಸುತ್ತಿಕೊಂಡಿದ್ದ ಇತರೆ ವಿವಾದಗಳನ್ನು ಚಿತ್ರದಲ್ಲಿ ಹೇಗೆ ತೋರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.