ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಲಾಗುತ್ತಿದೆ. ಎಷ್ಟೋ ಜನರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಹೀಗಾಗಿ ಈ ಸಂಸ್ಥೆಯ ಮೇಲೆ ಸಾಕಷ್ಟು ಜನರಿಗೆ ಗೌರವ ಭಾವನೆ ಇದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಕಿಡಿಗೇಡಿಗಳು ಜನರಿಂದ ಹಣ ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಚನ್ನರಾಯಪಟ್ಟಣದ ದರ್ಶನ್ ಎಂಬ ವ್ಯಕ್ತಿ, ಕಿಚ್ಚ ಸುದೀಪ್ ಹೆಸರು ಹೇಳಿಕೊಂಡು ಚಾಮರಾಜನಗರದ ಸುರೇಶ್ ಎಂಬುವವರಿಗೆ ಮೋಸ ಮಾಡಿದ್ದಾನೆ. ಚಾಮರಾಜನಗರದ ಡ್ರೈವರ್ ಸುರೇಶ್ಗೆ ಅಪಘಾತವಾಗಿತ್ತು. ಆಗ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ಬೇಕಿತ್ತು. ಇದನ್ನು ಗಮನಿಸಿದ ದರ್ಶನ್, ನಾನು ಸುದೀಪ್ ಚಾರಿಟಬಲ್ ಟ್ರಸ್ಟ್ ನಲ್ಲಿದ್ದೀನಿ. ಸುದೀಪ್ ಸಾರ್ಗೆ ಹೇಳಿ ನಿನ್ನ ಚಿಕಿತ್ಸೆಗೆ ಹಣದ ವ್ಯವಸ್ಥೆ ಮಾಡಿಸುತ್ತೇನೆ ಎಂದಿದ್ದಾನೆ. ನಂತರ ಸುರೇಶ್ ಕಡೆಯಿಂದ ಗೆಳೆಯನ ಗೂಗಲ್ ಪೇಗೆ ಮೂವತ್ತು ಸಾವಿರ ಹಣವನ್ನ ಹಾಕಿಸಿಕೊಂಡು ಯಾಮಾರಿಸಿದ್ದಾನೆ.
ಈ ಬಗ್ಗೆ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಗಮನಕ್ಕೆ ತಂದಾಗ, ಅದನ್ನು ಗಂಭೀರವಾಗಿ ಪರಿಗಣಿಸಿದ ಚಾರಿಟಬಲ್ ಟ್ರಸ್ಟ್ ಸದಸ್ಯ ರಮೇಶ್ ಕಿಟ್ಟಿಯವರು ಆರೋಪಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಷ್ಟೇ ಅಲ್ಲದೆ ಸುದೀಪ್ ಅಭಿಮಾನಿ ಹಾಗೂ ಸುದೀಪ್ ಚಾರಿಟಬಲ್ ಟ್ರಸ್ಟ್ ಕಡೆಯವರು ಅಂತ ಯಾರಾದರೂ ಹೇಳಿಕೊಂಡು, ಹಣ ಕೇಳುವ ವ್ಯಕ್ತಿಗಳು ಕಂಡು ಬಂದಲ್ಲಿ, ಕೂಡಲೇ ಸುದೀಪ್ ಚಾರಿಟಬಲ್ ಟ್ರಸ್ಟ್ ಗಮನಕ್ಕೆ ತನ್ನಿ ಎಂದು ಕಿಟ್ಟಿ ಮನವಿ ಮಾಡಿದ್ದಾರೆ.
ಓದಿ: ಮಿಡ್ನೈಟ್ ಎಲಿಮಿನೇಷನ್ನಲ್ಲಿ ದಿವ್ಯಾ ಸುರೇಶ್ ಔಟ್: ಟಾಪ್ 5 ಸ್ಪರ್ಧಿಗಳು ಯಾರು?