ಕಿಚ್ಚ ಸುದೀಪ್ ಅಭಿನಯದ ಎರಡು ಚಿತ್ರಗಳು ಬಿಡುಗಡೆಗೆ ಬಾಕಿ ಇವೆ. ಕೋವಿಡ್ ಎರಡನೇ ಅಲೆ ಇಲ್ಲದಿದ್ದರೆ ಇಷ್ಟೊತ್ತಿಗೆ `ಕೋಟಿಗೊಬ್ಬ-2' ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ಚಿತ್ರ ಬಿಡುಗಡೆ ಅನಿರ್ಧಿಷ್ಟಾವಧಿಗೆ ಮುಂದಕ್ಕೆ ಹೋಗಿದೆ. ಇನ್ನು,`ವಿಕ್ರಾಂತ್ ರೋಣ' ಚಿತ್ರವು ಆಗಸ್ಟ್ 19 ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಚಿತ್ರ ತಂಡ ಘೋಷಿಸಿದೆ. ಈ ಮಧ್ಯೆ, ಹಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಸುದೀಪ್ ನಟಿಸುತ್ತಾರೆ ಎಂಬ ಸುದ್ದಿಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ.
ಇತ್ತೀಚೆಗೆ ಶಂಕರ್ ನಿರ್ದೇಶನ ಮಾಡಿದ ಮತ್ತು ರಾಮ್ ಚರಣ್ ತೇಜ ಅಭಿನಯದ ಹೊಸ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿಯಾಗಿತ್ತು. ಪ್ರಭಾಸ್ ಅಭಿನಯದ `ಆದಿ ಪುರುಷ್' ಚಿತ್ರದಲ್ಲಿ ವಿಭಿಷಣನ ಪಾತ್ರಕ್ಕೆ ಅವರನ್ನು ಕೇಳಲಾಗಿದೆ ಎಂದು ಹೇಳಲಾಗಿತ್ತು. ಇದಲ್ಲದೆ ಮಲಯಾಳಂನ `ಅಯ್ಯುಪ್ಪನುಂ ಕೋಷಿಯುಂ'ನ ತೆಲುಗು ರೀಮೇಕ್‌ನಲ್ಲಿ, ಸುದೀಪ್ ನಟಿಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಲೇ ಇದ್ದವು. ಆದರೆ, ಈ ಚಿತ್ರಗಳಲ್ಲಿ ನಟಿಸುತ್ತಿರುವ ಬಗ್ಗೆ ಸುದೀಪ್ ಕಡೆಯಿಂದ ಯಾವುದೇ ಮಾಹಿತಿ ಇರಲಿಲ್ಲ. ಇದೀಗ ಮೊದಲ ಬಾರಿಗೆ ಸುದೀಪ್ ಈ ವಿಷಯವಾಗಿ ಮಾತನಾಡಿದ್ದಾರೆ.
ಓದಿ : ಸುದೀಪ್‌ಗೆ ಏನಾಗಿತ್ತು? ಕೊನೆಗೂ ಉತ್ತರಿಸಿದ ಕಿಚ್ಚ!
ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತ್ರ ಮಾತುಕತೆ ನಡೆಯುತ್ತಿದ್ದು, ಬೇರೆ ವಿಷಯಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಶಂಕರ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಕುರಿತು ಮಾತುಕತೆ ನಡೆಯುತ್ತಿದೆ. ಅದಿನ್ನೂ ಚರ್ಚೆಯ ಹಂತದಲ್ಲಿದ್ದು, ಷರತ್ತುಗಳು ಓಕೆಯಾದರೆ ಮಾತ್ರ ನಟಿಸುತ್ತೇನೆ. ಆದಿಪುರುಷ್ ಸೇರಿದಂತೆ ಬೇರೆ ಚಿತ್ರಗಳ ವಿಷಯ ನನ್ನ ಮ್ಯಾನೇಜರ್‌ವರೆಗೂ ಬಂದಿರಬಹುದು, ನನಗೆ ಇನ್ನೂ ಬಂದಿಲ್ಲ. ಹಾಗಾಗಿ, ಆ ಬಗ್ಗೆ ಇನ್ನೂ ನನಗೆ ಗೊತ್ತಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್' ನಂತರ `ಮಾಸ್ಟರ್ ಚೆಫ್' ಎಂಬ ಇನ್ನೊಂದು ರಿಯಾಲಿಟಿ ಶೋವನ್ನು ಸುದೀಪ್ ನಡೆಸಿಕೊಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ಅದು `ಬಿಗ್ ಬಾಸ್'ಗೆ ಕಾಂಪಿಟೇಶನ್ ಆಗಬಾರದು ಎಂಬ ಕಾರಣಕ್ಕೆ, ಅದನ್ನು ಸ್ವಲ್ಪ ಮುಂದೂಡಲಾಗಿದೆಯಂತೆ.