ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಎಂದು ಬಿರುದು ಹೊಂದಿರುವ ಕಿಚ್ಚ ಸುದೀಪ್ ಅದೆಷ್ಟೋ ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮುಸ್ಲಿಂ ಕುಟುಂಬದ ಹೆಣ್ಣುಮಗಳ ಮದುವೆಗಾಗಿ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಣದ ಸಹಾಯ ಮಾಡಲಾಗಿತ್ತು. ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಅಭಿಮಾನಿಯೊಬ್ಬರ ಆಸೆಯನ್ನು ಈಡೇರಲು ಕಿಚ್ಚ ಮುಂದಾಗಿದ್ದಾರೆ. ಚಿತ್ರದುರ್ಗದ ಯುವಕನೊಬ್ಬ ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿ. ಈ ಯುವಕ ಅಪೆಂಡಿಕ್ಸ್ ಕಾಯಿಲೆಗೆ ತುತ್ತಾಗಿದ್ದು ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸುದೀಪ್ ಅವರನ್ನು ಒಮ್ಮೆ ಭೇಟಿ ಆಗಬೇಕು ಎಂದು ಈತ ತನ್ನ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ತಿಳಿದ ಸುದೀಪ್, ಅಭಿಮಾನಿಯ ಆಸೆಯನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ.
ಯುವಕನೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿರುವ ಸುದೀಪ್ ನಾನು ನಿಮ್ಮನ್ನು ನನ್ನ ಬಳಿ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಏಕೆಂದರೆ ಈಗ ಪರಿಸ್ಥಿತಿ ಸ್ವಲ್ಪವೂ ಅನುಕೂಲವಾಗಿಲ್ಲ. ಎಲ್ಲೆಡೆ ಜನರು ಕೊರೊನಾ ಕಾರಣ ಭಯಭೀತರಾಗಿದ್ದಾರೆ. ಆದಷ್ಟು ಬೇಗ ನಿಮ್ಮನ್ನು ಬೆಂಗಳೂರಿಗೆ ಕರೆಸಿಕೊಂಡು ನಿಮ್ಮನ್ನು ಮುಖಾಮುಖಿಯಾಗಿ ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಸುದೀಪ್ ಅವರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ ಯುವಕ ಬಹಳ ಖುಷಿಯಾಗಿದ್ದಾರೆ. ಅಲ್ಲದೆ ಆದಷ್ಟು ಬೇಗ ಅವರನ್ನು ಎದುರಿಗೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.