ರಾಯಚೂರು: ಚಲನಚಿತ್ರ ನಟರನ್ನು ಆರಾಧಿಸಿ ಅವರ ಹೆಸರಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರ ಶ್ರೇಯೋಭಿವೃದ್ಧಿ ಪ್ರಾರ್ಥಿಸುವುದು ಅಭಿಮಾನಿಗಳು ನಡೆಸಿಕೊಂಡು ಬಂದಿರುವ ಕಾರ್ಯವಾಗಿದೆ. ಆದರೆ ರಾಯಚೂರಲ್ಲಿ ತಮ್ಮ ನೆಚ್ಚಿನ ನಟನ ದೇವಾಲಯ ನಿರ್ಮಾಣಕ್ಕೆ ಅಭಿಮಾನಿಗಳು ಮುಂದಾಗಿದ್ದಾರೆ.
Temple for kiccha sudeep: ಕನ್ನಡ ಸೇರಿ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ಥಳಿ ಕೆತ್ತಿಸಿರುವ ಅಭಿಮಾನಿಗಳು ಅವರಿಗಾಗಿ ದೇವಾಲಯ ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಮೊದಲು ಮಾನವನಾಗು ಎಂಬ ಸಂಘಟನೆ ಹುಟ್ಟುಹಾಕಿ ಆ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದರಂತೆ ಅವರ ಅಭಿಮಾನಿಗಳು ಸಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಈಗ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕುರಕೂಂದ ಗ್ರಾಮದಲ್ಲಿ ಸುದೀಪ್ ಅಭಿಮಾನಿಗಳು ದೇವಾಲಯ ನಿರ್ಮಿಸುತ್ತಿದ್ದು, ಈಗಾಗಲೇ ನಾಲ್ಕೂವರೆ ಅಡಿ ಎತ್ತರದ ಪುತ್ಥಳಿ ತಯಾರಾಗಿದ್ದು, ದೇವಾಲಯ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಬಾಕಿ ಉಳಿದ ಕಾಮಗಾರಿಯನ್ನ ಈ ವರ್ಷದೊಳಗೆ ಮುಗಿಸಿ ನಟ ಸುದೀಪ್ ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವ ಮಹದಾಸೆ ಹೊಂದಿದ್ದಾರೆ.
ದೇವಾಲಯ ನಿರ್ಮಾಣಕ್ಕಾಗಿ ಶರಣಬಸವ ಎನ್ನುವರು ಅಂದಾಜು 35x40 ಅಡಿಯಷ್ಟು ಭೂಮಿಯನ್ನು ಉಚಿತವಾಗಿ ನೀಡಿದ್ದಾರೆ. ಜೊತೆಗೆ ಗ್ರಾಮಸ್ಥರೇ ಹಣ ಒಟ್ಟುಗೂಡಿಸಿ ದೇವಾಲಯ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕಾರವಾರ ಯುವಕನ ಮೋಡಿ..'ಶೈನ್ ಲೈಕ್ ಎ ರೇನ್ಬೋ' ರ‍್ಯಾಪ್ ಸಾಂಗ್ಗೆ ಎಲ್ಲರೂ ಫಿದಾ