ಡಾ.ರಾಜ್ ಕುಮಾರ್ ಅಭಿಮಾನಿಗಳನ್ನ ದೇವರೆಂದರು. ಅದೇ ರೀತಿ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನಿಗಾಗಿ ಮೈಮೇಲೆ, ಕೈ ಮೇಲೆ ನೆಚ್ಚಿನ ನಟನ ಹೆಸರು ಹಾಗು ಫೋಟೋವನ್ನ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಾರೆ. ಸಿನಿಮಾ ಕಲಾವಿದರು ಹಾಗು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ತಮ್ಮ ನೆಚ್ಚಿನ ನಟನ ಜೊತೆ ಫೋಟೋ ಅಥವಾ ಭೇಟಿ ಮಾಡೋ ಅಭಿಲಾಷೆಯನ್ನ ಹೊಂದಿರುತ್ತಾರೆ.
ಈ ಮಾತಿಗೆ ಪೂರಕವಾಗಿ ಬಿಗ್ ಬಾಸ್ ನಲ್ಲಿ ಕನ್ನಡಿಗರ ಮನಗೆದ್ದ ಶಮಂತ್ ಬ್ರೋ ಗೌಡ, ಇತ್ತೀಚೆಗಷ್ಟೇ ತಮ್ಮ ನೆಚ್ಚಿನ ನಟನನ್ನ ಭೇಟಿ ಮಾಡಿ ತಮ್ಮ ಆಸೆಯನ್ನ ಈಡೇರಿಸಿಕೊಂಡಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಶಮಂತ್ ಗೌಡ, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ಅನ್ನು ಹೊಂದಿರುವ ಗಾಯಕ ಹಾಗು ನಟ.
ಕೆಲವು ದಿನಗಳ ಹಿಂದೆ ಶಮಂತ್ ಗೌಡ ತಮ್ಮ ಇಷ್ಟವಾದ, ಬಿಎಂಡಬ್ಲ್ಯೂ ಕಂಪನಿಯ 525D ಐಷಾರಾಮಿ ಕಾರನ್ನು ಖರೀದಿಸಿದ್ದರು. ಈ ಹೊಸ ಕಾರನ್ನ ಕಿಚ್ಚ ಸುದೀಪ್ ಕೈಯಲ್ಲಿ ಡ್ರೈವ್ ಮಾಡಿಸಬೇಕು ಅನ್ನೋದು ಶಮಂತ್ ಬ್ರೋ ಗೌಡ ಆಸೆಯಾಗಿತ್ತು. ತಮ್ಮ ಕನಸನ್ನು ಶಮಂತ್ ಬ್ರೋ ಗೌಡ ಈಗ ನನಸಾಗಿಸಿಕೊಂಡಿದ್ದಾರೆ.
ಜೆ ಪಿ ನಗರದಲ್ಲಿರೋ ಸುದೀಪ್ ನಿವಾಸಕ್ಕೆ ಶಮಂತ್ ತಮ್ಮ ಹೊಸ ಕಾರನ್ನ ತೆಗೆದುಕೊಂಡು ಹೋಗಿ ಸುದೀಪ್ ಅವರಿಗೆ ತಮ್ಮ ಹೊಸ ಕಾರನ್ನ ತೋರಿಸಿದ್ದಾರೆ. ಕಿಚ್ಚ ಸುದೀಪ್ ಕೂಡ ಶಮಂತ್ ಬ್ರೋ ಗೌಡ ಆಸೆಯಂತೆ, ಹೊಸ ಐಷಾರಾಮಿ ಕಾರಿನಲ್ಲಿ ಒಂದು ರೌಂಡ್ ಹಾಕಿ, ಆ ಕಾರಿನ ಮುಂದಿನ ಭಾಗದಲ್ಲಿ ಹೆಬ್ಬುಲಿ ಅಂತಾ ತಮ್ಮ ಆಟೋಗ್ರಾಫ್ ಹಾಕುವ ಮೂಲಕ ಶಮಂತ್ ಬ್ರೋ ಗೌಡನ ಆಸೆಯನ್ನ ಪೂರೈಸಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಸುದೀಪ್ ಆಶೀರ್ವಾದ ಪಡೆದ ಶಮಂತ್ ಸಾಕಷ್ಟು ಖುಷಿಯಿಂದ ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದೇ ಫೆಬ್ರವರಿ 24ಕ್ಕೆ ಸಿನಿಮಾ ರಿಲೀಸ್ ಆಗಲು ಎಲ್ಲಾ ತಯಾರಿ ನಡೆಸಿದೆ ಚಿತ್ರ ತಂಡ. ಈ ಚಿತ್ರ ಸಾಕಷ್ಟು ಕಾರಣಗಳಿಗೆ ಹಲವು ನಿರೀಕ್ಷೆಗಳನ್ನು ಮೂಡಿಸಿದೆ. ಸಿನಿಮಾ 3ಡಿಯಲ್ಲಿ ರಿಲೀಸ್ ಆಗುವುದರಿಂದಲೂ ಕೂಡ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಿವೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ