ಕನ್ನಡ ಸಿನಿಮಾ ಇತಿಹಾಸದಲ್ಲಿ ಹೊಸ ಅಲೆ ಸೃಷ್ಟಿಸಿದ ಸಿನಿಮಾ ಕೆಜಿಎಫ್ನಲ್ಲಿ ನಾಯಕನ ಅಮ್ಮನಾಗಿ ನಟಿಸಿ ಮನೆ ಮಾತಾಗಿರುವವರು ಚೆಂದುಳ್ಳಿ ಚೆಲುವೆ ಅರ್ಚನಾ ಜೋಯಿಸ್.

ರಾಜ್ಯ, ರಾಷ್ಟ್ರ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಈ ಸಿನಿಮಾದಲ್ಲಿ ಒಂದು ಹಾಡಿನ ಜೊತೆಗೆ ಒಂದಷ್ಟು ದೃಶ್ಯಗಳಲ್ಲಿ ಅಭಿನಯಿಸಿದ್ದ ಅರ್ಚನಾ ಸಿನಿರಂಗದಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡರು. ಕೆಜಿಎಫ್ ನಂತರ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಮತ್ತೊಮ್ಮೆ ಸಿನಿಪ್ರಿಯರನ್ನು ರಂಜಿಸಲು ಅವರು ಬರುತ್ತಿದ್ದಾರೆ.
ಪ್ರವೀಣ್ ಚಂದ್ರ ನಿರ್ದೇಶನದ #ಮ್ಯೂಟ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಅರ್ಚನಾರಿಗೆ ದೊರೆತಿದೆ. ಕೆಜಿಎಫ್ ನಂತರ ಕಾಲಾಂತರ, ನಕ್ಷೆ, ಮುಂದ್ ಒಂದು ದಿನ ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದರು. ಅಚಾನಕ್ ಆಗಿ ದೊರೆತ ಅವಕಾಶದಿಂದ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಸದ್ಯ, ಬದುಕು ರೂಪಿಸಿಕೊಂಡಿರುವ ಈ ನಟಿ ಕಿರುತೆರೆ ಮೂಲಕ ಬಣ್ಣದ ಪಯಣ ಶುರು ಮಾಡಿದ್ದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾದೇವಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದು ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾಗಿದ್ದರು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದುರ್ಗಾ ಧಾರಾವಾಹಿಯಲ್ಲಿ ನಾಯಕಿ ದುರ್ಗಾಳಾಗಿ ಅಭಿನಯಿಸಿ ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.