ಕನ್ನಡ ಚಿತ್ರರಂಗ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಸಿನಿಮಾ ಕೆಜಿಎಫ್-2. ಕಳೆದ 5 ತಿಂಗಳಿಂದ ಕೊರೊನಾ ಲಾಕ್ಡೌನ್ನಿಂದ ಚಿತ್ರೀಕರಣ ನಿಲ್ಲಿಸಿದ್ದ ಕೆಜಿಎಫ್2 ಚಿತ್ರೀಕರಣ ಮತ್ತೆ ಆರಂಭವಾಗಿದೆ.
ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಜೊತೆ ಇದೀಗ ಕೆಜಿಎಫ್ 2 ತಂಡಕ್ಕೆ ಬಹುಭಾಷಾ ನಟರೊಬ್ಬರು ಎಂಟ್ರಿ ನೀಡಿದ್ದಾರೆ. ಅವರೇ ಪ್ರಕಾಶ್ ರೈ. ಇಂದಿನಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆರಂಭ ಆಗಿರುವ ಚಿತ್ರೀಕರಣದಲ್ಲಿ ಪ್ರಕಾಶ್ ರೈ ಭಾಗವಹಿಸುತ್ತಿದ್ದಾರೆ. ಆದರೆ ಬೇಸರದ ವಿಚಾರ ಎಂದರೆ ಚಾಪ್ಟರ್ 1 ರಲ್ಲಿ ಹಿರಿಯ ನಟ ಅನಂತ್ ನಾಗ್ ಮಾಡಿದ್ದ ಪಾತ್ರವನ್ನು ಭಾಗ 2 ರಲ್ಲಿ ಪ್ರಕಾಶ್ ರೈ ಮಾಡುತ್ತಿದ್ದಾರೆ. ಆನಂದ್ ಇಂಗಳಗಿ ಪಾತ್ರವನ್ನು ಪ್ರಕಾಶ್ ರೈ ಮುಂದುವರೆಸುತ್ತಿದ್ದಾರೆ.
ಕೆಜಿಎಫ್ -2 ತಂಡ ಈ ಚಿತ್ರದಿಂದ ಅನಂತ್ನಾಗ್ ಹೊರ ಹೋಗಿರುವುದರ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಮೊದಲ ಭಾಗದಲ್ಲಿ ರಾಕಿ ಭಾಯ್ ಪರಿಚಯಿಸುವ ಪಾತ್ರ ಮಾಡಿದ್ದ ಅನಂತ್ ನಾಗ್ ಚಿತ್ರದಿಂದ ಹೊರ ನಡೆದಿದ್ದು ಆ ಸ್ಥಾನವನ್ನು ಪ್ರಕಾಶ್ ರೈ ತುಂಬಲಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕಾಶ್ ರೈ ಹಾಗೂ ಮಾಳವಿಕ ಅವಿನಾಶ್ ನಡುವೆ ನಡೆಯುವ ಮಾತುಕತೆಯ ಚಿತ್ರೀಕರಣ ಇಂದು ಆರಂಭ ಆಗಿದೆ. ಕೆಜಿಎಫ್-2 ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದ್ದು ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಂಗದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆಗಲಿದೆ.