ನಟ ಯಶ್ ಅಭಿನಯದ ಕೆಜಿಎಫ್-2 ಚಿತ್ರಕ್ಕೆ ಇನ್ನೊಂದು ಸವಾಲು ಎದುರಾಗಿದೆ. ಚಿತ್ರದ ಬಿಡುಗಡೆ ಯಾವಾಗ ಎಂದು ಚಿತ್ರತಂಡದವರು ಅಧಿಕೃತವಾಗಿ ಘೋಷಿಸದಿದ್ದರೂ ಬಹುತೇಕ ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗಬಹುದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಡಿಸೆಂಬರ್ ಕೊನೆಯ ವಾರ ಯಶ್ ಪಾಲಿನ ಲಕ್ಕಿ ವಾರವಂತೆ. ಈ ಹಿಂದಿನ ವರ್ಷಗಳಲ್ಲಿ ಆ ಸಮಯದಲ್ಲಿ ಬಿಡುಗಡೆಯಾದ ಯಶ್ ಅಭಿನಯದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಈ ಹಿನ್ನೆಲೆಯಲ್ಲಿ ಕೆಜಿಎಫ್-2 ಸಿನಿಮಾ ಸಹ ಕ್ರಿಸ್ಮಸ್ ಸಂದರ್ಭದಲ್ಲಿ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಇದೆ.
ಕ್ರಿಸ್ಮಸ್ ಸಂದರ್ಭದಲ್ಲಿ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಕಳೆದ ವರ್ಷವೇ ಘೋಷಿಸಿತ್ತು. ಇದೀಗ ಆ ಸಿನಿಮಾದ ಚಿತ್ರೀಕರಣ ಮುಗಿಯುತ್ತಾ ಬಂದಿದ್ದು, ಅಂದುಕೊಂಡಂತೆ ಅದೇ ದಿನ ಬಿಡುಗಡೆಯಾಗಲಿದೆ. ಈ ಮಧ್ಯೆ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರವನ್ನೂ ಕೂಡ ಅದೇ ದಿನ ಬಿಡುಗಡೆ ಮಾಡುವುದಾಗಿ ಮಂಗಳವಾರ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ಅಲ್ಲಿಗೆ ಈ ಕ್ರಿಸ್ಮಸ್ಗೆ ಎರಡು ದೊಡ್ಡ ಮತ್ತು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇವೆರಡರ ಜೊತೆಗೆ ಕೆಜಿಎಫ್-2 ಸಹ ಬಿಡುಗಡೆಯಾಗುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಇದೆ. ದೀಪಾವಳಿಗೆ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಹೊತ್ತಿಗೆ ಬಿಡುಗಡೆಯಾಗುವುದಕ್ಕೆ ತೆಲುಗಿನ ದೊಡ್ಡದೊಡ್ಡ ಚಿತ್ರಗಳು ಪೈಪೋಟಿ ನಡೆಸಿವೆ. ಅತ್ತ ದೀಪಾವಳಿಗೂ ಬರುವಂತಿಲ್ಲ, ಇತ್ತ ಸಂಕ್ರಾಂತಿಗೂ ಬರುವಂತಿಲ್ಲ. ಹೀಗಿರುವಾಗ ಕೆಜಿಎಫ್-2 ಚಿತ್ರ ಯಾವಾಗ ಬಿಡುಗಡೆ ಆಗಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.
ಇಷ್ಟಾದರೂ ಚಿತ್ರತಂಡ ಮಾತ್ರ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ಸದ್ಯದ ಮಟ್ಟಿಗೆ ಬೇರೆ ಚಿತ್ರಗಳ ಬಿಡುಗಡೆ ದಿನಾಂಕದ ಜೊತೆಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಬಹುಶಃ ಎಲ್ಲ ದೊಡ್ಡ ಚಿತ್ರಗಳು ಬಂದು ಹೋದ ಮೇಲೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಸುದೀಪ್ ಹೆಸರು ಬಳಸಿ ಹಣ ವಂಚನೆ ಮಾಡಿದ ಖದೀಮ: ಗಮನಕ್ಕೆ ತರುವಂತೆ ಮನವಿ ಮಾಡಿದ ಟ್ರಸ್ಟ್ ಸದಸ್ಯ