ಕಲರ್ಸ್ ಕನ್ನಡದ ಕನ್ನಡತಿ ಧಾರಾವಾಹಿಗೆ ಭಾರಿ ಬೇಡಿಕೆ ಬಂದಿದೆ. ಈ ವರ್ಷವೇ ಆರಂಭವಾಗಿರುವ ಹೊಚ್ಚ ಹೊಸ ಧಾರಾವಾಹಿ ಕನ್ನಡತಿ ಕೇವಲ ಎರಡು ತಿಂಗಳುಗಳ ಕಾಲವಷ್ಟೇ ಪ್ರಸಾರವಾಗಿತ್ತು. ಆ ಸಮಯದಲ್ಲಿಯೇ ಕೊರೊನಾ ಮಹಾಮಾರಿ ದೇಶಕ್ಕೆ ಕಾಲಿಟ್ಟಿದ್ದರಿಂದ ಶೂಟಿಂಗ್ ಸ್ಥಗಿತಗೊಂಡಿತು. ಈ ಕಾರಣಕ್ಕೆ ಕನ್ನಡತಿಯ ಫ್ರೆಶ್ ಎಪಿಸೋಡ್ಗಳು ಮುಗಿದ ಕೂಡಲೇ ಅದರ ಪ್ರಸಾರ ಕೊನೆಗೊಳಿಸಲಾಯಿತು.
ಲಾಕ್ಡೌನ್ ನೆಪದಲ್ಲಿ ಮತ್ತೆ ಮರು ಪ್ರಸಾರ ಕಂಡಿದ್ದ ಕನ್ನಡತಿ ಅರ್ಧದಲ್ಲೇ ನಿಂತಿದ್ದು ವೀಕ್ಷಕರಿಗೆ ಬೇಸರವಾಗಿತ್ತು. ತಮ್ಮ ನೆಚ್ಚಿನ ಧಾರಾವಾಹಿ ಕನ್ನಡತಿಯನ್ನು ಮತ್ತೆ ಪ್ರಸಾರ ಮಾಡಬೇಕೆಂಬ ಬೇಡಿಕೆಗೆ ವಾಹಿನಿಯವರು ಸೋಲಲೇಬೇಕಾಯಿತು. ಇದೀಗ ಮತ್ತೆ ಆರಂಭದ ಸಂಚಿಕೆಯಿಂದ ಕನ್ನಡತಿಯನ್ನು ಪ್ರಸಾರ ಮಾಡಲು ವಾಹಿನಿ ನಿರ್ಧರಿಸಿದೆ.
ಕನ್ನಡ ಭಾಷೆಯ ಮೇಲೆ ಅಪಾರ ಒಲವು ಹೊಂದಿರುವ ಹೆಣ್ಮಗಳು ಭುವನೇಶ್ವರಿ ಪಾತ್ರದಲ್ಲಿ ರಂಜನಿ ರಾಘವನ್ ಬಣ್ಣ ಹಚ್ಚಿದ್ದರೆ, ನಾಯಕ ಬ್ಯುಸಿನೆಸ್ ಮ್ಯಾನ್ ಹರ್ಷನಾಗಿ ಕಿರಣ್ ರಾಜ್ ಕಾಣಿಸಿಕೊಂಡಿದ್ದಾರೆ. ಪುಟ್ಟ ಗೌರಿಯಾಗಿ ಕಿರುತೆರೆ ಪ್ರಿಯರ ಮನ ಗೆದ್ದ ರಂಜನಿ ಮತ್ತೆ ಕಿರುತೆರೆಗೆ ಬರುವುದೇ ಇಲ್ಲ ಎಂದು ನಿರ್ಧರಿಸಿದ್ದರು. ಆದರೆ ಕನ್ನಡತಿಗಾಗಿ, ಕನ್ನಡದ ಮೇಲಿನ ಒಲವಿಗಾಗಿ ಅವರು ಮತ್ತೆ ಕಿರುತೆರೆಯತ್ತ ಮುಖ ಮಾಡಿದರು.
ಒಟ್ಟಿನಲ್ಲಿ ಕನ್ನಡತಿ ಧಾರಾವಾಹಿ ಮರು ಪ್ರಸಾರ ಆರಂಭಿಸಿರುವುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ.