ದುನಿಯಾ ವಿಜಯ್ ನಟನೆಯ 'ಸಲಗ' ಸಿನಿಮಾವನ್ನು ಇದೇ ಅಗಸ್ಟ್ 20ರಂದು (ವರಮಹಾಲಕ್ಷ್ಮೀ ಹಬ್ಬದಂದು) ರಿಲೀಸ್ ಮಾಡುವುದಾಗಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹೇಳಿದ್ದರು. ಆದರೆ ಕೋವಿಡ್ ಹಿನ್ನೆಲೆ ಸರ್ಕಾರ ಚಿತ್ರಮಂದಿರಗಳ ಮೇಲೆ ಕೆಲ ನಿರ್ಬಂಧ ಹೇರಿದೆ. ಹಾಗಾಗಿ 100 ರಷ್ಟು ಹಾಜರಾತಿಗೆ ಅನುಮತಿ ಕೊಟ್ಟರೆ ಮಾತ್ರ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಇಷ್ಟು ದಿನಗಳ ಕಾಲ ತೆರೆ ಮೇಲೆ ನಾಯಕನಾಗಿ ಮಿಂಚುತ್ತಿದ್ದ ವಿಜಯ್ 'ಸಲಗ' ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ಧರಿಸಿದ್ದಾರೆ. ಈ ಚಿತ್ರಕ್ಕೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಸಂಜಯ್ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕೊರೊನಾ ಹಿನ್ನೆಲೆ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ.
ಬುಧವಾರ ಕನ್ನಡ ಚಿತ್ರರಂಗದ ಹಲವು ಗಣ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಚಿತ್ರರಂಗ ಎದುರಿಸುತ್ತಿರುವ ಹಲವು ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಹಾಜರಾತಿಗೆ ಅನುಮತಿ ನೀಡುವ ವಿಷಯ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಕೊರೊನಾ ಮೂರನೇ ಅಲೆ ಭಯವಿರುವುದರಿಂದ ಇನ್ನೊಂದು ತಿಂಗಳಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಮುಂದಿನ ತಿಂಗಳವರೆಗೂ ಶೇ. 100 ರಷ್ಟು ಆಸನ ಭರ್ತಿಗೆ ಅವಕಾಶ ಸಿಗದಿರುವುದರಿಂದ 'ಸಲಗ' ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಕಡಿಮೆಯಿದೆ. ಜೊತೆಗೆ ಚಿತ್ರದ ಸೆನ್ಸಾರ್ ಕೆಲಸ ಸಹ ಬಾಕಿಯಿದ್ದು, ಯಾವಾಗ ಚಿತ್ರ ಬಿಡುಗಡೆಯಾಗುತ್ತದೆ ಎಂಬುದನ್ನು ಚಿತ್ರತಂಡ ಇನ್ನೂ ನಿರ್ಧರಿಸಿಲ್ಲ.