ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರಗಳ ಭರ್ಜರಿ ಯಶಸ್ಸಿನ ಬಳಿಕ, ಈ ಚಿತ್ರಗಳ ನಿರ್ಮಾಪಕ ಹೆಚ್.ಕೆ. ಪ್ರಕಾಶ್ ಮತ್ತೊಂದು ವಿಭಿನ್ನ ಸಿನಿಮಾದ ಮೂಲಕ ಜನರನ್ನು ರಂಜಿಸಲಿದ್ದಾರೆ.
‘ಸ್ಪೂಕಿ ಕಾಲೇಜ್’ ಎಂಬ ವಿಭಿನ್ನ ಚಿತ್ರವನ್ನು ಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಅಭಿನಯಿಸಿದ್ದ ವಿವೇಕ್ ಸಿಂಹ, ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಹಾಗೂ ಪೃಥ್ವಿ ರಾಷ್ಟಕೂಟ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾರರ್, ಕಾಮಿಡಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಭರತ್ ಜಿ. ನಿರ್ದೇಶಿಸುತ್ತಿದ್ದಾರೆ.
![ಅವನೇ ಶ್ರೀಮನ್ನಾರಾಯಣ ನಿರ್ಮಾಪಕರಿಂದ ಮತ್ತೊಂದು ವಿಭಿನ್ನ ಚಿತ್ರ](https://etvbharatimages.akamaized.net/etvbharat/prod-images/kn-bng-05-rangitaranga-producernidha-new-movie-7204735_02102020215559_0210f_1601655959_783.jpg)
ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಭರತ್ ಬರೆದಿದ್ದಾರೆ. ಈ ಚಿತ್ರದ ಚಿತ್ರೀಕರಣ ನವೆಂಬರ್ ಮೊದಲ ವಾರದಲ್ಲಿ ಧಾರವಾಡದ 103 ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ಆರಂಭವಾಗಲಿದೆ. ದ್ವಿತೀಯ ಹಂತದಲ್ಲಿ ದಾಂಡೇಲಿ ದಟ್ಟ ಅರಣ್ಯದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ಪ್ರಕಾಶ್ ಬೆಳವಾಡಿ, ಹನುಮಂತೇ ಗೌಡ, ರಘು ರಮಣಕೊಪ್ಪ, ಅರವಿಂದ್ ಬೋಳಾರ್, ವಿಜಯ್ ಚೆಂಡೂರ್, ಎಂ.ಕೆ. ಮಠ, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾರರ್, ಸೈಕಲಾಜಿಕಲ್ ಕಥಾ ಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರುತ್ತದೆ.
ಹಾಗಾಗಿ ಅದಕ್ಕೆ ಸಂಬಂಧಿಸಿದ ಕೆಲವು ಸಾಮಗ್ರಿಗಳನ್ನು ಮುಂಬೈನಿಂದ ತರಿಸಿಕೊಳುತ್ತಿರುವುದಾಗಿ ತಿಳಿಸಿರುವ ನಿರ್ದೇಶಕರು, ವಸ್ತ್ರ ವಿನ್ಯಾಸ ಕೂಡ ವಿಶೇಷವಾಗಿರುತ್ತದೆ ಎಂದು ತಿಳಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ವಿಶ್ವಾಸ್ ಕಲಾ ನಿರ್ದೇಶನ ಹಾಗೂ ಚೇತನ್ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.