ಕುಮಾರಸ್ವಾಮಿ ರವಿ ಸೀತಾರಾಮ ಶಾಸ್ತ್ರಿ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಲೇಖಕ, ನಿರ್ದೇಶಕ, ನಟ, ಮಾತುಗಾರ. 22 ಸೆಪ್ಟೆಂಬರ್ 1920 ಕು.ರ.ಸೀ ಅವರ ಜನ್ಮದಿನ. ಕನ್ನಡ ಚಿತ್ರರಂಗಕ್ಕೆ ಇವರು ನೀಡಿದ ಕೊಡುಗೆ ಅವಿಸ್ಮರಣೀಯ.
ಸುಮಾರು 70 ವರ್ಷಗಳ ಹಿಂದೆಯೇ ಕು.ರ.ಸೀ ವಿದೇಶಕ್ಕೆ ತೆರಳಿ 2 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇವರ ನೈಪ್ಯುಣ್ಯತೆಗೆ ಯಾರೂ ಸರಿಸಮರಿಲ್ಲ ಎನ್ನಬಹುದು. ಆಗಿನ ಕಾಲದಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ವಿವಾಹಕ್ಕೆ ಲಗ್ನ ಪತ್ರಿಕೆ ಮಾಡಿಕೊಟ್ಟವರು ಕು.ರ.ಸೀ ಅವರ ತಾತ ಹಾಗೂ ತಂದೆ. ಶಾಸ್ತ್ರ, ಸಂಪ್ರದ್ರಾಯ, ವೇದಾಧ್ಯಯನ, ಪುರಾಣ, ಪುಣ್ಯಕಥೆಗಳ ಪಠಣ ಮಾಡುವ ಪರಿಸರದಲ್ಲಿ ಬೆಳೆದ ಕು.ರ.ಸೀ ಕಾಲೇಜು ವ್ಯಾಸಂಗದಲ್ಲೂ ದೊಡ್ಡ ಹೆಸರು ಮಾಡಿದರು. ಒಂದು ರೀತಿಯಲ್ಲಿ ಇವರದು ಪರಿಪೂರ್ಣ ಜೀವನ. ಇತರ ಪ್ರತಿಭೆಗಳನ್ನು ಪ್ರೋತ್ಸಾಹಿಸಿದವರು ಕು.ರ.ಸೀ.
ಕು.ರ.ಸೀ ಅಂದರೆ ಹೆಚ್ಚು ಜ್ಞಾಪಕ ಬರುವುದು ಅವರು ರಚಿಸಿದ ಭೂಕೈಲಾಸ ಚಿತ್ರದ ರಾಮನ ಅವತಾರ ರಘುಕುಲ ಸೋಮನ ಅವತಾರ ಹಾಡು. ಇದರೊಂದಿಗೆ ಸ್ವಾಭಿಮಾನದ ನಲ್ಲೆ... ಈ ದೇಹದಿಂದ ದೂರನಾದೆ ಏಕೆ ಆತ್ಮನೇ..ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ...ಅಂದ ಚಂದವೇತಕೆ ಅಂತರಂಗದ ದೈವಕೆ... ಈ ದೇಹ ರಸಮಯ ಸದನ.....ದೇವ ದರುಶನವ ನೀಡಯ್ಯ.....ಜಯ ಭಾರತ ಜನನಿಯ ತನುಜಾತೆ.....ಜಯತೆ ಜಯತೆ ಸತ್ಯ ಮೇವ ಜಯತೆ.....(ಮನ್ನಾ ಡೇ ಹಾಡಿರುವುದು) ಮೈಸೂರು ದಸರ ಎಷ್ಟೊಂದು ಸುಂದರ.....ಏಳು ಸ್ವರವೂ ಸೇರಿ.....ಗಂಡು ಅಂದರೆ ಗಂಡು ಭೂಪತಿ ಗಂಡು...ಸೇರಿದಂತೆ ಹಾಡುಗಳು ಇಂದಿಗೂ ಬಹಳ ಫೇಮಸ್.
ಬೆಂಗಳೂರಿನ ತರಗುಪೇಟೆ, ಧರ್ಮರಾಯ ಸ್ವಾಮಿ ಸುತ್ತ ಮುತ್ತ ಕು.ರ.ಸೀ ಬಾಲ್ಯ ಕಳೆಯಿತು. ತಾತ ಹಾಗೂ ತಂದೆ ಹೆಸರಾಂತ ಪಂಡಿತರು. ಸಂಸ್ಕೃತ ಶಾಲೆಯಲ್ಲಿ ಇವರ ತಂದೆ ಅಧ್ಯಾಪಕರು. ಬಾಲ್ಯದಲ್ಲೇ ಇವರು ವೇದಾಧ್ಯಯನ, ವ್ಯಾಕರಣ ಕಲಿತಿದ್ದರು. ದಿವಾನ್ ಶೇಷಾದ್ರಿ ಅಯ್ಯರ್ ಅವರು ಕುಮಾರ ಕೃಪಾ ಬಂಗಲೆ ಕಟ್ಟಿಸಿದಾಗ ತಾತ ಹಾಗೂ ತಂದೆಯೊಂದಿಗೆ ಕು.ರ.ಸೀ ಅನೇಕ ಹೋಮ, ಹವನ, ವೇದ ಪಠಣಗಳಲ್ಲಿ ಪಾಲ್ಗೊಂಡಿದ್ದರು.
ವಿಲಿಯಂ ವರ್ಡ್ಸ್ವರ್ತ್ನಿಂದ ಇವರು ಪ್ರಭಾವಿತರಾದವರು. ಶಾಲಾ ದಿನಗಳಲ್ಲಿ ಷೇಕ್ಸ್ಪಿಯರ್ ನಾಟಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿದವರು. ಬೆಂಗಳೂರಿನ ತುಳಸಿ ತೋಟದಲ್ಲಿ (ಈಗಿನ ಶಾಂತಲಾ ಸಿಲ್ಕ್ ಹೌಸ್ ಪಕ್ಕ) ಅನೇಕ ನಾಟಕಗಳಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ ದೇವುಡು ನರಸಿಂಹ ಶಾಸ್ತ್ರಿ ಅವರಿಂದ ಬಹುಮಾನ ಕೂಡಾ ಪಡೆದಿದ್ದಾರೆ ನಂತರ 1937 ರಲ್ಲಿ ಜಾಲಿ ಅಮೆಚ್ಯೂರ್ ತಂಡ ಕಟ್ಟಿ ಅನೇಕ ನಾಟಕಗಳನ್ನು ಮಾಡಿದ್ದಾರೆ.
'ರವಿ' ಎಂಬ ಕಾವ್ಯ ನಾಮದಲ್ಲಿ ಕು.ರ.ಸೀ ಬರೆದ ಬರಹಗಳು, ನಗೆ ನಾಟಕಗಳು ಜನಪ್ರಿಯ ಆಗಿವೆ. 'ವರದಕ್ಷಿಣೆ' ಎಂಬ ನಾಟಕ ಬರೆದು ಕೂಡಾ ಅಭಿನಯ ಮಾಡಿದ್ದಾರೆ. ರವೀಂದ್ರನಾಥ ಠಾಗೋರ್, ಬಿ.ಎಂ.ಶ್ರೀ ಬರಹಗಳು ಇವರನ್ನು ಆಕರ್ಷಿಸುತ್ತದೆ. ಮಹಾತ್ಮ ಗಾಂಧಿ ಅವರು ನಿಧನ ಆದ ಸಮಯದಲ್ಲಿ 'ಮಕ್ಕಳ ತಾತ...ಸತ್ಯ ಪ್ರೇಮ ಅಹಿಂಸೆಗಳ ಕಲ್ಪತರು ಗಾಂಧಿ' ಎಂದು ಬರೆದ ಹಾಡು ಹೆಚ್ಚು ಮನ್ನಣೆ ಪಡೆಯುತ್ತದೆ.
ಆಗಲೇ ಗುಬ್ಬಿ ಕಂಪನಿಯ ಉಸ್ತಾದ್ ಗುಬ್ಬಿ ವೀರಣ್ಣ ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡು ನಾಟಕಗಳ ರಚನೆ ಹಾಗೂ ಇನ್ನಿತರ ಕೆಲಸಗಳಲ್ಲಿ ಇವರು ಬೆಳೆಯಲು ಅವಕಾಶ ನೀಡುತ್ತಾರೆ. 1945 ರಲ್ಲಿ 'ಹೇಮ ರೆಡ್ಡಿ ಮಲ್ಲಮ್ಮ' ಚಿತ್ರಕ್ಕೆ ಮೊದಲು ಸಹಾಯಕ ನಿರ್ದೇಶಕ, ನಿರ್ಮಾಣದ ಕೆಲಸದೊಂದಿಗೆ ಪಾತ್ರವನ್ನು ಕೂಡಾ ಮಾಡುತ್ತಾರೆ. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಮಾಡಬೇಕಾದ ಕೆಲಸವನ್ನು ಇವರೇ ನಿರ್ವಹಿಸಿ ಸೈ ಅನ್ನಿಸಿಕೊಳ್ಳುತ್ತಾರೆ.
1946 ರಲ್ಲಿ ಹೊನ್ನಪ್ಪ ಭಾಗವತರ್ ಅಭಿನಯದ 'ಭಕ್ತ ಕುಂಬಾರ' ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ, ಸಹಾಯಕ ನಿರ್ದೇಶಕರಾಗಿ ಕು.ರ.ಸೀ ಕೆಲಸ ಮಾಡುತ್ತಾರೆ. ಆಗ ಕು.ರ.ಸೀ ಅವರಿಗೆ ಎಸ್. ರಾಮನಾಥ್ ಅವರ ಸ್ನೇಹ ಬೆಳೆಯುತ್ತದೆ. ಕೆಲವು ದಿನಗಳ ಕಾಲ 'ಚಿತ್ರವಾಣಿ' ಪತ್ರಿಕೆಯಲ್ಲಿ ಬರಹಗಾರರಾಗಿ ಕೆಲಸ ಮಾಡುತ್ತಾರೆ.
'ಗುಣ ಸಾಗರಿ' ಚಿತ್ರದಲ್ಲಿನ ಇವರ ಕೆಲಸ ನೋಡಿ ಷಾ ಬ್ರದರ್ಸ್ ಇವರಿಗೆ ವಿದೇಶಕ್ಕೆ ಹೋಗಲು ಆಹ್ವಾನ ನೀಡುತ್ತಾರೆ. 1952 ರಿಂದ 3 ವರ್ಷ ಇವರು ವಿದೇಶದಲ್ಲಿ 'ಕುರಾನ್ ಕಾವ್' ಹಾಗೂ 'ಇಮಾನ್' ಚಿತ್ರಗಳ ನಿರ್ದೇಶನ ಮಾಡುತ್ತಾರೆ. ಈ ಚಿತ್ರಗಳಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಕೂಡಾ ಲಭಿಸುತ್ತದೆ. ಇವರ ಜೊತೆಗೆ ಗಿರಿಮಾಜಿ, ಭಾಸ್ಕರ್, ವಾಸುದೇವ್, ಪುರುಷೋತ್ತಮ್ ಹಾಗೂ ಪರಮೇಶ್ವರ್ ಸಹ ಸಿಂಗಪುರ್ನಂತ ದೇಶದಲ್ಲಿ ಕೆಲಸದ ಅನುಭವ ಪಡೆಯುತ್ತಾರೆ. ಕು.ರ.ಸೀ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಬಲ್ಲವರಾಗಿದ್ದರಿಂದ ಇವರಿಗೆ ಕೆಲಸ ಬಹಳ ಸುಲಭ ಆಗುತ್ತದೆ.
ವಿದೇಶದಿಂದ ಬಂದ ನಂತರ ಹೊನಪ್ಪ ಭಾಗವತರ್ ಅವರ ಮಹಾಕವಿ ಕಾಳಿದಾಸ , ರಾಣಿ ಹೊನ್ನಮ್ಮ, ಸದಾರಮೆ, ಅಣ್ಣತಂಗಿ ಸಿನಿಮಾಗಳಿಗೆ ತಮ್ಮ ವಿದ್ಯೆಯನ್ನು ಧಾರೆ ಎರೆಯುತ್ತಾರೆ. 'ಅಣ್ಣತಂಗಿ' ಚಿತ್ರದ ಮೂಲಕ ಬಿ. ಸರೋಜಾ ದೇವಿ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದರು. ಮೊದಲ ಸಿನಿಮಾದಲ್ಲೇ ಅವರಿಗೆ ರಾಷ್ಟ್ರಪ್ರಶಸ್ತಿ ದೊರೆಯುತ್ತದೆ. ಡಾ. ರಾಜ್ಕುಮಾರ್, ಬಿ. ಸರೋಜಾ ದೇವಿ ಅಭಿನಯದ ಈ ಚಿತ್ರ 99 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಾಣುತ್ತದೆ.
ಇವರ ಸಾಹಿತ್ಯದ ಆಳ ಬೆರಗು ಮೂಡಿಸುವಂತದ್ದು. ನಿರ್ಮಾಪಕ ಚೆಟ್ಟಿಯಾರ್ ಅವರು ತೆಲುಗಿನ ಬರಹಗಾರ ನರ್ತರಾಜ್ ಅವರಿಗೆ 10 ನಿಮಿಷ ಅವಧಿಯಲ್ಲಿ ಸಂಪೂರ್ಣ ರಾಮಾಯಣ ಇರುವಂತೆ ಬರೆಯಬೇಕು ಎಂದು ಹೇಳಿದಾಗ ನರ್ತರಾಜ್, ಅದು ಸಾಧ್ಯವೇ ಇಲ್ಲ, ಹಾಗೆ ಯಾರಾದರೂ ಬರೆದರೂ ನಾನು ಬರವಣಿಗೆ ನಿಲ್ಲಿಸುತ್ತೇನೆ ಎಂದು ಎನ್ನುತ್ತಾರೆ. ಈ ಸಮಯದಲ್ಲಿ ಕು.ರ.ಸೀ ಅವರಿಗೆ ಈ ಆಹ್ವಾನ ನೀಡಲಾಗುತ್ತದೆ. ಕೇವಲ ಎರಡು ದಿನಗಳಲ್ಲಿ 10 ನಿಮಿಷದ ಅವಧಿಗೆ ಮೀರದಂತೆ ಸಂಪೂರ್ಣ ರಾಮಾಯಣ ಮೂಡಿಬರುವ ಹಾಡು 'ರಾಮನ ಅವತಾರ ರಘುಕುಲ ಸೋಮನ ಅವತಾರ' ಹಾಡನ್ನು ಬರೆಯುತ್ತಾರೆ. ಈ ಹಾಡು ಇಂದಿಗೂ ಬಹಳ ಫೇಮಸ್. ತೆಲುಗು ಬರಹಗಾರ ನರ್ತರಾಜ್ ಕು.ರ.ಸೀ ಅವರ ಪ್ರತಿಭೆ ನೋಡಿ ಬೆರಗಾಗಿ ಹೋಗುತ್ತಾರೆ.
ಕು.ರ.ಸೀ ಸ್ವತಃ ಪಾಂಡಿತ್ಯ ಹೊದಿದ್ದರೂ ಇತರರ ಪಾಂಡಿತ್ಯವನ್ನು ಪತ್ತೆ ಹಚ್ಚಿ ಪ್ರೋತ್ಸಾಹ ನೀಡುತ್ತಿದ್ದವರು. ಒಮ್ಮೆ ಹೊನ್ನಪ್ಪ ಭಾಗವತರ್ ಅವರು 'ಮಹಾಕವಿ ಕಾಳಿದಾಸ' ಚಿತ್ರಕ್ಕೆ ಕು.ರ.ಸೀ ಅವರಿಗೆ ನೀವೇ ಗೀತ ರಚನೆ ಮಾಡಿ ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿಕೊಳ್ಳದ ಕು.ರ.ಸೀ, ಈ ಸಿನಿಮಾಗೆ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಬರೆದರೆ ಚೆಂದ ಎಂದು ಹೇಳಿದ್ದಾರೆ. ಅದರಂತೆ ಹೊನ್ನಪ್ಪ ಭಾಗವತರ್ ಅವರೊಂದಿಗೆ ಬೆಳ್ಳಾವೆ ನರಹರಿ ಶಾಸ್ತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತಾರೆ.
'ಠಕ್ಕ ಬಿಟ್ರೆ' ಸಿಕ್ಕ ಚಿತ್ರಕ್ಕೆ ಹಿಂದಿ ಸಂಗೀತ ನಿರ್ದೇಶಕ ಸಲೀಲ್ ಚೌಧರಿ ಹಾಡಿಗೆ ಕು.ರ.ಸೀ ಕೇವಲ 15 ನಿಮಿಷದಲ್ಲಿ ಹಾಡು ಬರೆದುಕೊಟ್ಟಿದ್ದು ಅವರಿಗೆ ಆಶ್ಚರ್ಯ ಆಗಿತ್ತು. ಕು.ರ.ಸೀ ಅವರ ಬರವಣಿಗೆ ಶೈಲಿಯೇ ಸೊಗಸು. ನಾಡಿನ ಸೊಗಡು, ಸಂಸ್ಕೃತಿ ಇವರ ಬರವಣಿಗೆಯಲ್ಲಿ ಕಾಣುತ್ತಿತ್ತು. ಇವರು ಯಾವುದೇ ಚಿತ್ರಕ್ಕೆ ಬರೆಯಲು ಕೂತರೆ ಪಕ್ಕದಲ್ಲಿ ಒಂದು ಗಡಿಯಾರ ಇಟ್ಟುಕೊಳ್ಳುತ್ತಿದ್ದರು. 2:10 ನಿಮಿಷದ ಸಿನಿಮಾ ಅಂದರೆ ಅವರು 2:08 ನಿಮಿಷಕ್ಕೆ ಅವರ ಬರವಣಿಗೆಯನ್ನು ಮುಗಿಸುತ್ತಿದ್ದರು.
ಕು.ರ.ಸೀ ಅವರ ಸಿನಿಮಾಗಳಲ್ಲಿ ಹೆಚ್ಎಂಕೆ ಮೂರ್ತಿ ಅವರ ಸಹಾಯಕರಾಗಿ ಈಗಿನ ಹಿರಿಯ ಛಾಯಾಗ್ರಾಹಕ ಬಿ.ಎಸ್. ಬಸವರಾಜ್ 'ಪರಿವರ್ತನೆ' ಹಾಗೂ 'ಪೂರ್ಣಿಮ' ಸಿನಿಮಾಗಳಿಗೆ ಕೆಲಸ ಮಾಡಿದ್ದರು. ಈ ದಿಗ್ಗಜರನ್ನು ಬಿ.ಎಸ್. ಬಸವರಾಜ್ ಸ್ಮರಿಸಿಕೊಂಡಿದ್ದಾರೆ.
12 ನವೆಂಬರ್ 1977 ರಲ್ಲಿ ಕು.ರ.ಸೀ ನಿಧನರಾದರು. ಕು.ರ.ಸೀ ಅವರಿಗೆ ಐವರು ಮಕ್ಕಳು. ಆರ್ಯ, ಪೂರ್ಣ ಕೃಷ್ಣಮೂರ್ತಿ, ಕುಮಾರ್, ಭಾರ್ಗವ್ ಹಾಗೂ ಆರವ್. ಇವರೆಲ್ಲಾ ಈಗ ವಿದೇಶದಲ್ಲಿ ನೆಲೆಸಿದ್ದಾರೆ.