ಕವಿರತ್ನ ಕಾಳಿದಾಸ, ಶಬರಿಮಲೆ ಅಯ್ಯಪ್ಪ ಸೇರಿದಂತೆ ಹಲವು ಉತ್ತಮ ಐತಿಹಾಸಿಕ ಮತ್ತು ಭಕ್ತಿಪ್ರಧಾನ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದ ಖ್ಯಾತ ನಿರ್ದೇಶಕ, ಆತ್ಮೀಯ ರೇಣುಕಾ ಶರ್ಮಾ ಕೋವಿಡ್ಗೆ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಂತಾಪ ವ್ಯಕ್ತಪಡಿಸಿದ್ದಾರೆ.
ಕವಿರತ್ನ ಕಾಳಿದಾಸ ಸಿನಿಮಾ ಡಾ. ರಾಜ್ಕುಮಾರ್ ಅವರ ಅಮೋಘ ಅಭಿನಯವನ್ನು ಅನಾವರಣಗೊಳಿಸಿದ ಚಿತ್ರ. ನಟ ಅನಂತ್ ನಾಗ್ ಮತ್ತು ಮಾಧವಿ ಅಭಿನಯದ ಅನುಪಮ ಸಿನಿಮಾ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರೇಣುಕಾ ಶರ್ಮಾ, ಐತಿಹಾಸಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳನ್ನು ಅರ್ಥಪೂರ್ಣವಾಗಿ ತೆರೆಗೆ ತರುತ್ತಿದ್ದ ದೈತ್ಯ ಪ್ರತಿಭೆ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ನಾಗಾಭರಣ ಸಂತಾಪ ಸೂಚಿಸಿದ್ದಾರೆ.
ಇನ್ನು, ಕನ್ನಡದ ವಿವಿಧ ಕ್ಷೇತ್ರದ ಮಹನೀಯರನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಮನಸ್ಸನ್ನು ಛಿದ್ರಗೊಳಿಸಿದೆ. ಹಿಂದೆಂದೂ ಕಾಣದಂತಹ ಸಂಕಷ್ಟದ ಕಾಲ ಇದಾಗಿದ್ದು, ಯಾರೊಬ್ಬರೂ ಉದಾಸೀನ ಮಾಡದೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.