ಕಾಮಿಡಿ ಪಾತ್ರಗಳನ್ನು ಮಾಡುತ್ತಾ ಕನ್ನಡ ಚಿತ್ರರಂಗಕ್ಕೆ ಬಂದು ಆ ನಂತರ ಹೀರೋಗಳಾದ ಹಲವರು ಇದ್ದಾರೆ. ಈ ಸಾಲಿಗೆ ಕೆಂಪೇಗೌಡ ಸಹ ಸೇರಿಕೊಂಡಿದ್ದಾರೆ. ಕೆಂಪೇಗೌಡ ಅವರು ಸುಮಾರು 15 ವರ್ಷಗಳ ಹಿಂದೆಯೇ ಕನ್ನಡ ಚಿತ್ರರಂಗಕ್ಕೆ ಬಂದವರು. 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಮಿಡಿ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡವರು. ಇದೀಗ ಅವರು ‘ಕಟ್ಲೆ’ ಎನ್ನುವ ಸಿನಿಮಾ ಮೂಲಕ ಮೊದಲ ಬಾರಿಗೆ ಹೀರೋ ಆಗಿದ್ದಾರೆ.
ಕಾಮಿಡಿ ನಟ ಹೀರೋ ಆಗುತ್ತಿದ್ದಾರೆ ಎಂದರೆ, ಇದೊಂದು ಕಾಮಿಡಿ ಚಿತ್ರ ಇರಬಹುದು ಎಂಬ ಭಾವನೆ ಬರಬಹುದು. ಆದ್ರೆ ಇದು ಕಾಮಿಡಿ ಚಿತ್ರವಲ್ಲ. ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಂತೆ. ಸಾವು ಬರೀ ದೇಹಕ್ಕೆ ಮಾತ್ರ, ಆತ್ಮಕ್ಕೆ ಇರುವುದಿಲ್ಲ. ಆತ್ಮವೂ ಪಂಚಭೂತಗಳಲ್ಲಿ ವಿಲೀನವಾಗಿ ಮತ್ತೊಮ್ಮೆ ಇನ್ನೊಂದು ರೂಪದಲ್ಲಿ ಹುಟ್ಟಿಬರುತ್ತದೆ. ಈ ವಿಷಯವನ್ನೂ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆಯಂತೆ.
ಅಂದಹಾಗೆ, ಕಟ್ಲೆ ಎನ್ನುವುದು ಹಳೆಗನ್ನಡ ಪದ. ಕಟ್ಲೆ ಎಂದರೆ ಸಮಯ ಎಂಬ ಅರ್ಥವಿದ್ದು, ಪ್ರತಿಯೊಬ್ಬ ಮನುಷ್ಯನಿಗೂ ಸಮಯ ಬಂದೇ ಬರುತ್ತದೆ ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗುತ್ತಿದೆಯಂತೆ.
ಕಟ್ಲೆ ಚಿತ್ರದಲ್ಲಿ ಕೆಂಪೇಗೌಡ ಹೀರೋ ಆದರೆ, ಅವರಿಗೆ ಅಮೃತ ಮತ್ತು ಶರಣ್ಯ ಎಂಬ ಇಬ್ಬರು ನಾಯಕಿಯರು. ಮಿಕ್ಕಂತೆ ಟೆನ್ನಿಸ್ ಕೃಷ್ಣ, ಪವನ್ ಕುಮಾರ್, ಕರಿಸುಬ್ಬು ಮುಂತಾದವರು ನಟಿಸುತ್ತಿರುವ ಈ ಚಿತ್ರದ ಶೇ. 70ರಷ್ಟು ಚಿತ್ರೀಕರಣ ಮುಗಿದಿದೆಯಂತೆ. ಎಸ್.ಎಸ್. ವಿಧಾ ಎನ್ನುವರು ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.