ನಟ ಪ್ರಮೋದ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಟ-ನಟಿಯರ ಹುಟ್ಟುಹಬ್ಬಕ್ಕೆ ಒಂದಿಷ್ಟು ಹೊಸ ಚಿತ್ರಗಳ ಘೋಷಣೆ ಇದ್ದೇ ಇರುತ್ತದೆ. ಅದರಂತೆ ಪ್ರಮೋದ್ ಅವರ ಎರಡು ಹೊಸ ಚಿತ್ರಗಳು ಘೋಷಣೆಯಾಗಿವೆ.
ಈ ಪೈಕಿ ಮೊದಲನೆಯದು 'ಅಲಂಕಾರ್ ವಿದ್ಯಾರ್ಥಿ' ಕೂಡ ಒಂದು. ಈ ಹೆಸರು ಕೇಳಿದ ತಕ್ಷಣ ವಿಚಿತ್ರ ಎಂದೆನಿಸಬಹುದು. ಶಾಲಾ-ಕಾಲೇಜುಗಳಲ್ಲಿ ಅಲಂಕಾರ ವಿದ್ಯಾರ್ಥಿಗಳು ಎಂದಿರುತ್ತಾರೆ. ಅವರು ಹೆಸರಿಗೆ ಮಾತ್ರ ವಿದ್ಯಾರ್ಥಿಗಳು. ಮಿಕ್ಕಂತೆ ತಮ್ಮದೇ ಪ್ರಪಂಚದಲ್ಲಿ ವಿಹರಿಸುತ್ತಿರುತ್ತಾರೆ. ಈಗ ಅಂತಹದೆ ಕಥೆಯೊಂದರಲ್ಲಿ ಪ್ರಮೋದ್ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಧನ್ವಿತ್ ಕೇಶವ್ ಎನ್ನುವವರು ನಿರ್ದೇಶನ, ಕಥೆ-ಚಿತ್ರಕಥೆ ಸಹ ಮಾಡುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಗಲಿದೆ.
ಇದರ ಜೊತೆಗೆ ಡಿಸೈನರ್ ಅವೀಸ್ ನಿರ್ದೇಶನದ ಹೊಸ ಚಿತ್ರದಲ್ಲೂ ಪ್ರಮೋದ್ ನಟಿಸುತ್ತಿದ್ದು, ಈ ಚಿತ್ರದ ಬಗ್ಗೆ ಹೆಚ್ಚಿನ ವಿಷಯಗಳು ಇನ್ನಷ್ಟೇ ಗೊತ್ತಾಗಬೇಕಿದೆ. ಇದಲ್ಲದೆ ಪ್ರಮೋದ್, ಸಂತೋಷ್ ನಾಯಕ್ ಎಂಬ ಹೊಸ ನಿರ್ದೇಶಕರ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಆ ಚಿತ್ರ ಸಹ ಇನ್ನಷ್ಟೇ ಶುರುವಾಗಬೇಕಿದೆ.
'ಪ್ರೀಮಿಯರ್ ಪದ್ಮಿನಿ' ನಂತರ ಕಳೆದ ವರ್ಷ ಪ್ರಮೋದ್ ಅಭಿನಯದ 'ಮತ್ತೆ ಉದ್ಭವ' ಬಿಡುಗಡೆಯಾಗಿತ್ತು. ಈ ಚಿತ್ರದ ನಂತರ ಅವರು ಇನ್ನೊಂದಿಷ್ಟು ಚಿತ್ರಗಳಲ್ಲಿ ನಟಿಸಬೇಕು ಎನ್ನುವಷ್ಟರಲ್ಲೇ ಲಾಕ್‍ಡೌನ್ ಘೋಷಣೆಯಾಯಿತು. ಲಾಕ್‍ಡೌನ್ ಮುಗಿಯುತ್ತಿದ್ದಂತೆಯೇ ಪ್ರಮೋದ್ ಹಲವು ಚಿತ್ರಗಳನ್ನು ಒಪ್ಪಿದ್ದಾರೆ. ಈಗಾಗಲೇ ಇಂಗ್ಲೀಷ್ ಮಂಜ, ಹಂಡ್ರೆಡ್ ಮಂಕೀಸ್, ರತ್ನನ್ ಪ್ರಪಂಚ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಇನ್ನೂ ಮೂರು ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದು, ಬ್ಯುಸಿ ನಟರಾಗಿದ್ದಾರೆ.