ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ 'ಪುಷ್ಪ 'ದಲ್ಲಿ ಡಾಲಿ ಧನಂಜಯ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಕನ್ಫರ್ಮ್ ಆಗಿದೆ. ಅಲ್ಲು ಅರ್ಜುನ್ ಎದುರು ಧನಂಜಯ್ ವಿಲನ್ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿ ಬಂದಿತ್ತಾದರೂ ಇದರಲ್ಲಿ ಸ್ಪಷ್ಟತೆ ಇರಲಿಲ್ಲ. ಏಕೆಂದರೆ, ಧನಂಜಯ್ ಜೊತೆಗೆ ಇನ್ನಷ್ಟು ಹೆಸರುಗಳು ಸಹ ಕೇಳಿ ಬಂದಿದ್ದವು.
ಪ್ರಮುಖವಾಗಿ ಒಂದು ಹಂತದಲ್ಲಿ ತಮಿಳು ನಟ ವಿಜಯ್ ಸೇತುಪತಿ ಚಿತ್ರಕ್ಕೆ ವಿಲನ್ ಆಗಿಯೇ ಬಿಟ್ಟರು ಎಂಬ ಸುದ್ದಿ ಇತ್ತು. ಆದರೆ, ಕ್ರಮೇಣ ವಿಜಯ್ ಸೇತುಪತಿ ಬದಲು ಇನ್ನೊಂದಿಷ್ಟು ಹೆಸರುಗಳು ಕೇಳಿ ಬಂದವು. ಸುನಿಲ್ ಶೆಟ್ಟಿ, ಮಾಧವನ್ ಮುಂತಾದವರು ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಈಗ ಅವರನ್ನೆಲ್ಲಾ ಪಕ್ಕಕ್ಕಿಟ್ಟು, ಧನಂಜಯ್ ಅವರನ್ನು ಚಿತ್ರದ ಮುಖ್ಯ ವಿಲನ್ ಆಗಿ ಆಯ್ಕೆ ಮಾಡಲಾಗಿದೆಯಂತೆ. ಈ ಹಿಂದೆ, 'ಟಗರು' ಮತ್ತು ಇನ್ನಿತರ ಚಿತ್ರಗಳಲ್ಲಿ ಧನಂಜಯ್ ಅವರ ಪ್ರತಿಭೆಯನ್ನು ನೋಡಿದ್ದ ನಿರ್ದೇಶಕ ಸುಕುಮಾರ್, ಈ ಚಿತ್ರಕ್ಕೆ ಅವರೇ ಸರಿ ಎಂದು ಧನಂಜಯ್‍ಗೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ನಾನು ಯಾವ ಆಡಿಷನ್ ಕರೆದಿಲ್ಲ, ಸುಳ್ಳು ಸುದ್ದಿ ನೋಡಿ ಮೋಸ ಹೋಗಬೇಡಿ...ಧನಂಜಯ್
ಈ ಬಾರಿ ಸುದ್ದಿ ಪಕ್ಕಾ ಆಗಿರುವುದಷ್ಟೇ ಅಲ್ಲ, ಈಗಾಗಲೇ ಧನಂಜಯ್ ಎರಡು ದಿನಗಳ ಚಿತ್ರೀಕರಣದಲ್ಲೂ ಭಾಗವಹಿಸಿ ಬಂದಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ರಾಜಮಂಡ್ರಿಯಲ್ಲಿ ಚಿತ್ರೀಕರಣ ನಡೆದಿದ್ದು, ಧನಂಜಯ್ ಅದರಲ್ಲಿ ಭಾಗವಹಿಸಿದ್ದರಂತೆ. ಮುಂದಿನ ವಾರದಿಂದ ಅವರು ಚಿತ್ರಕ್ಕೆ 20ಕ್ಕೂ ಹೆಚ್ಚು ದಿನಗಳ ಕಾಲ್‍ಶೀಟ್ ನೀಡಿದ್ದಾರೆ ಎಂದು ಹೇಳಲಾಗಿದ್ದು, ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸಲು ಹೈದರಾಬಾದ್‍ಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.