ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾದ ಬಿಡುಗಡೆಗಾಗಿ ಅಪ್ಪು ಫ್ಯಾನ್ಸ್ ಕಾಯ್ತಿದ್ದಾರೆ. ಈ ಮಧ್ಯೆಯೇ 'ಜೇಮ್ಸ್' ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ಕಾಶ್ಮೀರಕ್ಕೆ ಪುನೀತ್ ರಾಜ್ ಕುಮಾರ್ ತೆರಳಿದ್ದು, ಶೂಟಿಂಗ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ಸದ್ಯಕ್ಕೆ ಕಾಶ್ಮೀರದ ಸುಂದರ ತಾಣದಲ್ಲಿ ಪುನೀತ್ ಅಂಡ್ ಟೀಂ ಇದ್ದು, ಅಲ್ಲಿ ರೊಮ್ಯಾಂಟಿಕ್ ಹಾಡಿನ ಜೊತೆಗೆ ಟಾಕಿ ಪೋಷನ್ ಸನ್ನಿವೇಶಗಳನ್ನು ನಿರ್ದೇಶಕ ಚೇತನ್ ಕುಮಾರ್ ಚಿತ್ರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.

ಶೂಟಿಂಗ್ ನಡುವೆಯೇ ಅಪ್ಪು, ಕಾಶ್ಮೀರಿ ಜನರು ಹಾಗೂ ಮಕ್ಕಳ ಜೊತೆ ಕೆಲ ಕಾಲ ಸಮಯ ಕಳೆದಿದ್ದಾರೆ. ಕಾಶ್ಮೀರದ ಪುಟಾಣಿ ಮಗುವೊಂದರ ಜೊತೆ ಪುನೀತ್ ಸ್ಪೆಲ್ಫಿ ತೆಗೆದುಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಕಾಶ್ಮೀರದಲ್ಲಿ ಹರ್ಷ ಮಾಸ್ಟರ್ ನಿರ್ದೇಶನದಲ್ಲಿ ಒಂದು ಹಾಡು ಹಾಗೂ ನಿರ್ದೇಶಕ ವಿಜಯ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಲಾಗುತ್ತಿದೆ. ಅಪ್ಪು ಜೊತೆ ಹಿರಿಯ ನಟ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕಿಶೋರ್ ಪತ್ತಿಕೊಂಡ ನಿರ್ಮಾಪಕರಾಗಿದ್ದಾರೆ. 'ಭರ್ಜರಿ' ಹಾಗೂ 'ಭರಾಟೆ' ಸಿನಿಮಾದ ಬಳಿಕ ನಿರ್ದೇಶಕ ಚೇತನ್ ಕುಮಾರ್ 'ಜೇಮ್ಸ್' ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.