ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕವೇ ಗಮನ ಸೆಳೆಯುವ ಬಾಲಿವುಡ್ ನಟಿ ಕಂಗನಾ ರಣಾವತ್, ಇತ್ತೀಚೆಗೆ ಬಿಡುಗಡೆಯಾದ ದೀಪಿಕಾ ಪಡುಕೋಣೆ ಅಭಿನಯದ 'ಗೆಹ್ರೈಯಾನ್' ಸಿನಿಮಾವನ್ನು ಟೀಕಿಸಿದ್ದಾರೆ.
ಶನಿವಾರ ತಮ್ಮ ಇನ್ಸ್ಟಾಗ್ರಾಮ್ನಲ್ಲಿ 'ಗೆಹ್ರೈಯಾನ್' ಕುರಿತು ಅಭಿಪ್ರಾಯ ಹಂಚಿಕೊಂಡ ನಟಿ, ‘ನಾನೂ ಕೂಡ ಈ ಕಾಲದವಳೇ. ಈ ಬಗೆಯ ರೊಮ್ಯಾನ್ಸ್ ಅನ್ನು ಗುರುತಿಸಿ, ಅರ್ಥ ಮಾಡಿಕೊಳ್ಳಬಲ್ಲೆ. ಹೊಸ ಯುಗದ ಸಿನಿಮಾ, ನಗರ ಪ್ರದೇಶದ ಸಿನಿಮಾ ಎಂಬ ಹೆಸರಿನಲ್ಲಿ ಕಸವನ್ನೆಲ್ಲ ಮಾರಾಟ ಮಾಡಬೇಡಿ. ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾವೇ ಆಗಿರುತ್ತದೆ. ಎಷ್ಟೇ ಅಶ್ಲೀಲತೆ ಅಥವಾ ಮೈ ತೋರಿಸಿದರೂ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಇದು ಸತ್ಯ. 'ಗೆಹ್ರೈಯಾನ್' ಸಿನಿಮಾದಲ್ಲಿ ಯಾವುದೇ ಆಳವಾದ ವಿಷಯ ಇಲ್ಲ ಎಂದು 1965ರಲ್ಲಿ ಬಿಡುಗಡೆಯಾದ ಹಿಮಾಲಯ ಕಿ ಗಾಡ್ ಮೇ ಚಲನಚಿತ್ರದ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ಗೆಹ್ರೈಯಾನ್'ನಲ್ಲಿ ದೀಪಿಕಾ-ಸಿದ್ಧಾಂತ್ ರೊಮ್ಯಾನ್ಸ್.. ರಣವೀರ್‌ನ ಅನುಮತಿ ಕೇಳಿದ್ದೀರಾ ಎಂಬ ಕಾಮೆಂಟ್ಗೆ ನಟಿಯ ಉತ್ತರವೇನು?
'ಗೆಹ್ರೈಯಾನ್' ಸಿನಿಮಾದಲ್ಲಿನ ಲಿಪ್‌ಲಾಕ್, ರೊಮ್ಯಾಂಟಿಕ್ ಸೀನ್ಗಳು ಒಂದಿಷ್ಟು ಮಂದಿಯ ಮನಸ್ಸು ಗೆದ್ದಿದ್ದರೆ, ಮತ್ತೊಂದಿಷ್ಟು ಮಂದಿ ಈ ಬಗ್ಗೆ ಟೀಕೆ- ಟಿಪ್ಪಣಿ ಮಾಡುತ್ತಿದ್ದಾರೆ. ಶಕುನ್ ಬಾತ್ರಾ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ, ಧೈರ್ಯ ಕರ್ವಾ, ನಾಸಿರುದ್ದೀನ್ ಶಾ ಮತ್ತು ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರೊಮ್ಯಾನ್ಸ್ ಸೀನ್ಗಳಿಂದ ಚಿತ್ರ ಸಖತ್ ಸುದ್ದಿಯಲ್ಲಿದೆ.