ರಾಘವ ಲಾರೆನ್ಸ್ ಅಭಿನಯದ ಹಾರರ್-ಕಾಮಿಡಿ 'ಕಾಂಚನ 3' ಸಿನಿಮಾ ಇಂದು ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ದೇಶಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯದ ಸುಮಾರು 150 ಚಿತ್ರಮಂದಿರಗಳನ್ನು ಕಾಂಚನ ಆವರಿಸಿದ್ದಾಳೆ.
50ಕ್ಕೂ ಹೆಚ್ಚು ಮಾಲ್ಗಳಲ್ಲಿ ಹಾಗೂ 100 ಚಿತ್ರಮಂದಿರಗಳಲ್ಲಿ ಕಾಂಚನ ದಿನಕ್ಕೆ 3 ಪ್ರದರ್ಶನವಾಗಲಿದೆ. ಥಿಯೇಟರ್ಗಳ ಸಂಖ್ಯೆ ನೋಡಿದರೆ ಪರಭಾಷೆ ಹಾವಳಿ ಹೇಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾದ ಅವಶ್ಯಕತೆಯಿಲ್ಲ. ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಎಷ್ಟೋ ಚಿತ್ರಮಂದಿರಗಳು ಕಾಂಚನ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿವೆ. ಇದು ಸಂವಿಧನಾತ್ಮಕವಾಗಿ ತಪ್ಪಲ್ಲ, ಸಿಸಿಐ (ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯ) ಪರವಾಗಿಯೂ ತಪ್ಪಲ್ಲ. ಆದರೆ ಇಂತಹ ಪರಿಸ್ಥಿತಿ ಬೇರೆ ರಾಜ್ಯದಲ್ಲಿ ಉಂಟಾ ಎಂಬುದನ್ನು ಯೋಚಿಸಬೇಕಾದ ವಿಷಯ ಬಹಳ ಮುಖ್ಯ. ಬೆಂಗಳೂರು ಕೆ.ಜಿ. ರಸ್ತೆಯ ಅನುಪಮ ಚಿತ್ರಮಂದಿರದಲ್ಲೂ ‘ಕಾಂಚನ 3’ ಬಿಡುಗಡೆ ಆಗುತ್ತಿದೆ. ಬೃಂದಾ ಅಸ್ಸೋಸಿಯೇಟ್ಸ್ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ.
ರಾಘವ ಲಾರೆನ್ಸ್ ಈ ಸಿನಿಮಾವನ್ನು ನಿರ್ದೇಶಿಸಿರುವುದಲ್ಲದೆ ಸನ್ ಪಿಕ್ಚರ್ಸ್ ಜೊತೆ ಸೇರಿ ನಿರ್ಮಾಣ ಕೂಡಾ ಮಾಡಿದ್ದಾರೆ. ವೇದಿಕ, ಓವಿಯ, ನಿಕ್ಕಿ ತಂಬೋಳಿ, ಕೋವೈ ಸರಳ, ಸೂರಿ, ಮನೋಬಲ, ಶ್ರೀಮನ್ ದೇವದರ್ಶಿನಿ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.