'ಕಲಿವೀರ', ಮಾಸ್ ಟೈಟಲ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಲು ರೆಡಿಯಾಗಿರುವ ಸಿನಿಮಾ. ಬಹುತೇಕ ಚಿತ್ರೀಕರಣ ಮುಗಿಸಿರುವ 'ಕಲಿವೀರ' ಚಿತ್ರತಂಡ ತಮ್ಮ ಸಿನಿಮಾ ವಿಶೇಷತೆ ಬಗ್ಗೆ ಹಂಚಿಕೊಳ್ಳಲು ಇಂದು ಸುದ್ದಿಗೋಷ್ಠಿ ಏರ್ಪಡಿಸಿತ್ತು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ಈ ಚಿತ್ರದ ನಾಯಕ ಏಕಲವ್ಯ, ಯೋಗ, ಕತ್ತಿ ವರಸೆ, ಲಾಠಿ ವರಸೆ ಪ್ರದರ್ಶನ ಮಾಡುವ ಮೂಲಕ ತನ್ನ ಪ್ರತಿಭೆ ಏನು ಎಂಬುದನ್ನು ತೋರಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಲ್ವರು ನಿರ್ಮಾಪಕರು, ನಿರ್ದೇಶಕ ಅವಿನಾಶ್ ಭೂಷಣ್,ಯುವ ನಟ ಏಕಲವ್ಯ, ತಬಲಾ ನಾಣಿ, ನೀನಾಸಂ ಅಶ್ವಥ್, ನಟಿಯರಾದ ಪಾವನ ಗೌಡ, ಚಿರಶ್ರೀ ಅಂಚನ್ ,ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ಸಂಗೀತ ನಿರ್ದೇಶಕ ವಿ.ಮನೋಹರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಅನ್ಯಾಯದ ವಿರುದ್ಧ ಹೋರಾಡುವ ನಾಯಕ ತನಗೆ ತಿಳಿದಿರುವ ವಿದ್ಯೆಗಳಾದ ಯೋಗ, ಮಾರ್ಷಲ್ ಆರ್ಟ್, ಕೇರಳದ ಕಳರಿ ಪಯಟ್ಟು, ಕತ್ತಿ ವರಸೆ, ಲಾಠಿ ವರಸೆಯಿಂದ ಹೋರಾಡಿ ಜಯಶೀಲನಾಗುತ್ತಾನೆ ಎಂಬುದೇ ಈ ಸಿನಿಮಾದ ಕಥಾಹಂದರ.

ನಿಜಜೀವನದಲ್ಲಿ ಯಾರೂ ಇಲ್ಲದ ನಟ ಏಕಲವ್ಯ, ಯೋಗ, ಕೇರಳದ ಕಳರಿ ಪಯಟ್ಟು, ಕತ್ತಿ ವರಸೆ, ಜಿಮ್ನಾಸ್ಟಿಕ್, ಮಾರ್ಷಲ್ ಆರ್ಟ್ ಹಾಗೂ ಇನ್ನಿತರ ಕಲೆಗಳನ್ನು ಕಲಿತು ಇದೀಗ ರಿಯಲ್ ಸ್ಟಂಟ್ ಜೊತೆಗೆ ಸಿನಿಮಾದಲ್ಲಿ ಅಭಿನಯಿಸಿರುವುದು ವಿಶೇಷ. ಚಿತ್ರದಲ್ಲಿ ಚಿರಶ್ರೀ ಏಕಲವ್ಯಗೆ ಜೋಡಿಯಾಗಿದ್ದು, ಪಾವನ ಗೌಡ ವಕೀಲೆ ಪಾತ್ರ ಮಾಡುತ್ತಿದ್ದಾರೆ. ತಬಲಾ ನಾಣಿ ಹಾಗು ನೀನಾಸಂ ಅಶ್ವಥ್ ಕೂಡಾ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಏಕಲವ್ಯ ಅವರ ಪ್ರತಿಭೆ ನೋಡಿ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ನಾಲ್ಕು ಅದ್ಭುತ ಆ್ಯಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರಂತೆ. ಇನ್ನು 'ಕನ್ನಡ ದೇಶದೋಳ್' ಸಿನಿಮಾ ನಿರ್ದೇಶಿಸಿದ್ದ ಅವಿನಾಶ್ ಭೂಷಣ್ ಈ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕಥೆಗೆ ತಕ್ಕಂತೆ, ವಿ. ನಾಗೇಂದ್ರ ಪ್ರಸಾದ್, ಅರಸು ಅಂತಾರೆ, ಗಿರಿಧರ್ ಎಳೆಕ್ಕೊಳೆ ಹಾಗೂ ಸಚಿನ್ ಕಡೂರ್ ಬರೆದಿರುವ ಗೀತೆಗಳಿಗೆ , ವಿ. ಮನೋಹರ್ ಸಂಗೀತ ನೀಡಿದ್ದಾರೆ. ಎಸ್. ಹಾಲೇಶ್ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದು ಈ ಸಿನಿಮಾ ಪೋಸ್ಟರ್ನಿಂದಲೇ ಗಮನ ಸೆಳೆಯುತ್ತಿದೆ.