'ಕಾಗೆ ಬಂಗಾರ' ಕನ್ನಡ ಸಿನಿಮಾ ಶೀರ್ಷಿಕೆ ಇದೀಗ ವಿವಾದಕ್ಕೆ ಸಿಲುಕಿದೆ. ಕಳೆದ 5 ವರ್ಷಗಳ ಹಿಂದೆ ನಿರ್ದೇಶಕ ದುನಿಯಾ ಸೂರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ ಈ ಶೀರ್ಷಿಕೆಯನ್ನು ಪಡೆದಿದ್ದರು. ಆದರೆ ಕೃಷ್ಣೇಗೌಡ ಅಧ್ಯಕ್ಷತೆ ಸಂಘ 'ಕಾಗೆ ಬಂಗಾರ' ಶೀರ್ಷಿಕೆಯನ್ನು ನಿರ್ದೆಶಕ ದಿನೇಶ್ ಗೌಡ ಅವರಿಗೆ ನೀಡಿದೆ.

ಇನ್ನು ಕಳೆದ ತಿಂಗಳು 13 ರಂದು ದಿನೇಶ್ ಗೌಡ ಈ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದು ಏಪ್ರಿಲ್ 1 ರಿಂದ ಚಿತ್ರೀಕರಣ ಆರಂಭಿಸಲಿದ್ದಾರೆ. ಆದರೆ ನಿರ್ದೇಶಕ ದುನಿಯಾ ಸೂರಿ ಪರ ಹಿರಿಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಂತಿದೆ. ಈ ‘ಕಾಗೆ ಬಂಗಾರ’ ಹೆಸರಿನಲ್ಲಿ ಯಾರು ಮೊದಲು ಸೆನ್ಸಾರ್ ಅನುಮತಿ ಪತ್ರ ತರುತ್ತಾರೋ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದೆ. ಹೀಗಿರುವಾಗ ನಿರ್ದೇಶಕ ದಿನೇಶ್ ಗೌಡ ಅವರಿಗೆ ಭಯವಿಲ್ಲ. ಕಾರಣ ಇವರ ‘ಕಾಗೆ ಬಂಗಾರ’ ಕಥಾ ವಸ್ತು ಸಹ ಬೇರೆಯದು. ಇದು ಮಕ್ಕಳ ಸಿನಿಮಾ. ನಮ್ಮ ಸಿನಿಮಾವೇ ಮೊದಲು ಸೆನ್ಸಾರ್ಗೆ ಅನುಮತಿ ಪಡೆಯುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.

ನಮ್ಮ ಕಥಾ ವಸ್ತುವಿಗೂ ಸಹ ‘ಕಾಗೆ ಬಂಗಾರ’ ಶೀರ್ಷಿಕೆ ಹೊಂದಿಕೊಳ್ಳುವುದರಿಂದ ನಾವು ಇದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕಾಗೆ ಬಂಗಾರ ಪುಡಿಯನ್ನು ಮುಖಕ್ಕೆ ಮೆತ್ತಿಕೊಂಡು ಸೂರ್ಯನ ಬೆಳಕಿನಲ್ಲಿ ಹೊಳೆಯುವುದನ್ನು ನೋಡಿ ಸಂತೋಷಪಡುವುದನ್ನು ನಾನು ಕಂಡಿದ್ದೇನೆ, ಅನುಭವಿಸಿದ್ದೇನೆ ಎನ್ನುವ ದಿನೇಶ್ ಗೌಡ, ಆಗಿನ ಕಾಲದ ಕೆಲವು ಹೆಸರುಗಳನ್ನು ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇದೇ ಸಮಯದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ದಿನೇಶ್ ಗೌಡರಿಗೆ ಬುಲಾವ್ ಬಂದಿದೆ. ಶೀರ್ಷಿಕೆ ಬದಲಾವಣೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ, ಸದ್ಯಕ್ಕೆ ಪ್ರೊಡಕ್ಷನ್ ನಂ 1 ಹೆಸರಿನಲ್ಲಿ ಚಿತ್ರೀಕರಣ ಮಾಡುತ್ತೇನೆ ಎಂದಿದ್ದಾರೆ ದಿನೇಶ್ ಗೌಡ.

ಆದರೆ ದಿನೇಶ್ ಗೌಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕ್ಷಮಾಪಣೆ ಕೇಳಿ ಚಿತ್ರದ ಶೀರ್ಷಿಕೆಯನ್ನು ಬಿಟ್ಟು ಕೊಟ್ಟಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿರುವುದು ದಿನೇಶ್ ಮನಸ್ಸಿಗೆ ಬೇಸರವಾಗಿದೆಯಂತೆ. ಇದು ಕೃಷ್ಣೇಗೌಡರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೋಪಕ್ಕೆ ಕೂಡಾ ಕಾರಣವಾಗಿದೆ. ಅದೇನೇ ಆಗಲಿ ನನ್ನ ಸಿನಿಮಾ ಟೈಟಲ್ ‘ಕಾಗೆ ಬಂಗಾರ’ ಎಂದೇ ಇರಬೇಕು ಎಂಬುದಾಗಿ ದಿನೇಶ್ ಗೌಡ ಹಠ ಹಿಡಿದಿದ್ದಾರೆ. ಆದ್ದರಿಂದ ಏಪ್ರಿಲ್ 1 ರಿಂದ ಚಿತ್ರೀಕರಣ ಆರಂಭಿಸಲಿದ್ದಾರೆ ದಿನೇಶ್ ಗೌಡ. ಈ ಚಿತ್ರದಲ್ಲಿ ವೈಜ್ಯನಾಥ್ ಬಿರಾದರ್, ಗುರುರಾಜ ಹೊಸಕೋಟೆ, ಮಾಸ್ಟರ್ ಮದುಸೂಧನ್, ಕುಮಾರಿ ಪ್ರಣವಿ ಹಾಗೂ 40 ಮಕ್ಕಳ ಜೊತೆಗೆ ಹಿರಿಯ ರಂಗ ಕಲಾವಿದರು ನಟಿಸುತ್ತಿದ್ದಾರೆ.

ಮಂಜು ಶ್ರೀ ಮೂವೀಸ್ ಅಡಿಯಲ್ಲಿ ಮುನೇಗೌಡ, ಕೃಷ್ಣಪ್ಪ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ರಾಜಶೇಖರ್ ಹಾಗೂ ನಟರಾಜ್ ಬರೆದಿದ್ದಾರೆ. ರಘು ರೂಪಿ ಹಾಗೂ ಮನೋಹರ್ ಛಾಯಾಗ್ರಹಣ, ಫಳಣಿ ಡಿ. ಸೇನಾಪತಿ ಸಂಗೀತ ಈ ಚಿತ್ರಕ್ಕಿದೆ.