ಬ್ರಹ್ಮ, ಐ ಲವ್ ಯೂ ಸಿನಿಮಾ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್. ಚಂದ್ರು ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ. ಈಗಾಗಲೇ ಪೋಸ್ಟರ್ ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಕಬ್ಜ ಚಿತ್ರ ತಂಡದಿಂದ ಬಿಗ್ ನ್ಯೂಸ್ವೊಂದು ಅನೌನ್ಸ್ ಆಗಿದೆ.
ಸಂಕ್ರಾಂತಿ ಹಬ್ಬದ ವಿಶೇಷವಾಗಿ ನಿರ್ದೇಶಕ ಆರ್. ಚಂದ್ರು, ಕನ್ನಡದ ಸ್ಟಾರ್ ನಟರೊಬ್ಬರ ಆಗಮನವಾಗಿದೆ ಅಂತಾ ಅನೌನ್ಸ್ ಮಾಡಿದ್ದಾರೆ. ಅವರೇ ಕಿಚ್ಚ ಸುದೀಪ್. 80ರ ದಶಕದ ಅಂಡರ್ ವರ್ಲ್ಡ್ ಕಥೆ ಆಧರಿಸಿರೋ ಕಬ್ಜ ಚಿತ್ರದಲ್ಲಿ, ಕಿಚ್ಚನ ಲುಕ್ ಹೇಗಿರುತ್ತೆ? ಅನ್ನೋದನ್ನ ಪೋಸ್ಟರ್ ಮೂಲಕ ಅನಾವರಣಗೊಳಿಸಲಾಗಿದೆ.
ಕನ್ನಡ, ಹಿಂದಿ, ತೆಲುಗು, ತಮಿಳಿನಲ್ಲೂ ಬೇಡಿಕೆ ಹೊಂದಿರುವ ಕಿಚ್ಚ ಸುದೀಪ್. ಆಗಾಗ ಕೆಲ ಸಿನಿಮಾಗಳಲ್ಲಿ ಅವರು ಅತಿಥಿ ಪಾತ್ರ ಹಾಗೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಈಗ ಮತ್ತೆ ಉಪೇಂದ್ರ ಜೊತೆಯಾಗಿದ್ದಾರೆ. 2016ರಲ್ಲಿ ತೆರೆ ಕಂಡಿದ್ದ ಮುಕುಂದ ಮುರಾರಿ ಸಿನಿಮಾದಲ್ಲಿ ನಟ ಉಪೇಂದ್ರ ಹೀರೋ ಆಗಿದ್ದರೆ, ಸುದೀಪ್ ದೇವರ ಪಾತ್ರದಲ್ಲಿ ರಂಜಿಸಿದ್ದರು. ಈಗ ಕಬ್ಜ ಚಿತ್ರದಲ್ಲಿ ಉಪೇಂದ್ರ ಎದುರು ಕಿಚ್ಚ ವಿಲನ್ ಆಗಿ ಅಬ್ಬರಿಸಲಿದ್ದಾರಾ? ಎಂಬ ಅನುಮಾನ ಮೂಡಿದೆ. ಈಗಾಗಲೇ ಕಬ್ಜ ಚಿತ್ರಕ್ಕಾಗಿ ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ಅದ್ದೂರಿ ಸೆಟ್‌ಗಳನ್ನು ನಿರ್ಮಿಸಲಾಗಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ.
ಓದಿ: ಕಬ್ಜ ಚಿತ್ರದ ಪೋಸ್ಟರ್ ರಿಲೀಸ್... ಬುದ್ಧಿವಂತನಿಗೆ ರಾಮ್ಗೋಪಾಲ್ ವರ್ಮಾ ಕೊಟ್ರು ಗಿಫ್ಟ್
ಜನವರಿ ಕೊನೆಯ ವಾರ ಮುಂದಿನ ಹಂತದ ಚಿತ್ರೀಕರಣ ಆರಂಭವಾಗಲಿದೆ. ಉಪೇಂದ್ರ ಅವರು ಈ ಚಿತ್ರಕ್ಕಾಗಿ ಪ್ರತಿದಿನ ನಾಲ್ಕು ಗಂಟೆಗೂ ಹೆಚ್ಚು ಕಾಲ ವ್ಯಾಯಾಮ ಮಾಡಿ, ಚಿತ್ರೀಕರಣಕ್ಕೆ ಬೇಕಾದ ಹಾಗೆ ಸಜ್ಜಾಗುತ್ತಿದ್ದಾರಂತೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು, ಕಬ್ಜ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ಜೊತೆಗೆ ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕೇನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್ ರಾವ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ನಟಿಸುತ್ತಿದ್ದಾರೆ. ದುಬಾರಿ ವೆಚ್ಚದಲ್ಲಿ ನಿರ್ದೇಶಕ ಆರ್. ಚಂದ್ರು ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ.