ಕನ್ನಡ ಚಿತ್ರರಂಗದಲ್ಲಿ ಡಾ. ವಿಷ್ಣುವರ್ಧನ್ ಅಭಿನಯದ 'ಆಪ್ತಮಿತ್ರ' ಸಿನಿಮಾ ಹಿಟ್ಲಿಸ್ಟ್ಗೆ ಸೇರಿತ್ತು. ಇದು ತಮಿಳಿನಲ್ಲಿಯೂ ರಿಮೇಕ್ ಆಗಿದ್ದು, ಸೂಪರ್ಸ್ಟಾರ್ ರಜನಿಕಾಂತ್ ಅವರು 'ಚಂದ್ರಮುಖಿ' ಸಿನಿಮಾದಲ್ಲಿ ನಟಿಸಿದ್ದರು. ಕನ್ನಡದಲ್ಲಿ ನಟಿ ಸೌಂದರ್ಯ ಗಂಗಾ ಹಾಗೂ ನಾಗವಲ್ಲಿ ಪಾತ್ರದಲ್ಲಿ ಅಭಿನಯಿಸಿದರೆ, ತಮಿಳಿನಲ್ಲಿ ನಟಿ ಜ್ಯೋತಿಕಾ ಈ ಪಾತ್ರ ನಿರ್ವಹಿಸಿದ್ದರು.
ಇದೀಗ ತಮಿಳಿನಲ್ಲಿ ಚಂದ್ರಮುಖಿ-2 ಚಿತ್ರ ತೆರೆಗೆ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ. ವಿಶೇಷ ಎಂದರೆ 15 ವರ್ಷಗಳ ಹಿಂದೆ ‘ಚಂದ್ರಮುಖಿ’ ಚಿತ್ರಕ್ಕೆ ನಟಿಯಾಗಿ ಮೊದಲು ಆಯ್ಕೆಯಾಗಿದ್ದು ನಟಿ ಸಿಮ್ರನ್. ಈಕೆ ಕನ್ನಡದಲ್ಲಿ 'ಸಿಂಹದ ಮರಿ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟಿದ್ದರು. ಆದರೆ ಚಂದ್ರಮುಖಿ ಸಿನಿಮಾ ಚಿತ್ರೀಕರಣದ ವೇಳೆ ಸಿಮ್ರನ್ ಅವರು ಗರ್ಭಿಣಿಯಾಗಿದ್ದರಿಂದ ಅಭಿನಯಿಸಲು ಆಗಿರಲಿಲ್ಲ. ಆದರೆ ಇದೀಗ ಚಂದ್ರಮುಖಿ-2 ಸಿನಿಮಾಗೆ ಸಿಮ್ರನ್ ಒಪ್ಪಿಗೆ ಸೂಚಿಸಿದ್ದಾರೆ. ಈ ಚಿತ್ರ ಸನ್ ಪಿಕ್ಚರ್ ಅಡಿಯಲ್ಲಿ ಪಿ ವಾಸು ಅವರೇ ನಿರ್ದೇಶನ ಮಾಡಲು ಮುಂದಾಗಿದ್ದು, ರಾಘವ ಲಾರೆನ್ಸ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ನಟಿ ಜ್ಯೋತಿಕಾ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ "ಈಗ ಮತ್ತೆ ಗಂಗಾ ಹಾಗೂ ಚಂದ್ರಮುಖಿ ಪಾತ್ರ ಮಾಡಲಾರೆ. ನನ್ನ ಜಾಗಕ್ಕೆ ಸಿಮ್ರನ್ ಸೂಕ್ತ" ಎಂದು ತಿಳಿಸಿದ್ದರು.