ಕನ್ನಡದ ಕಿರುತೆರೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವ ಧಾರಾವಾಹಿ ಎಂದರೆ ಅದು ಜೊತೆಜೊತೆಯಲಿ. ಆರೂರು ಜಗದೀಶ್ ನಿರ್ದೇಶನದ ಜೊತೆಜೊತೆಯಲಿ ಧಾರಾವಾಹಿಯು ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದ್ದು, ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ.
ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಎಂಬ ಸುಂದರವಾದ ಆರಂಭದೊಂದಿಗೆ ಶುರುವಾಗುವ ಈ ಧಾರಾವಾಹಿಯ ಜೊತೆಗೆ ಅದರ ಹಾಡನ್ನು ಕೂಡಾ ಜನ ಮೆಚ್ಚಿಕೊಂಡಿದ್ದಾರೆ. ಹರ್ಷಪ್ರಿಯ ಬರೆದಿರುವ ಈ ಅದ್ಭುತವಾದ ಸಾಲುಗಳುಳ್ಳ ಜೊತಜೊತೆಯಲಿ ಧಾರಾವಾಹಿಯ ಸಂಪೂರ್ಣ ಶೀರ್ಷಿಕೆ ಹಾಡು ಜನವರಿ 23 ರಂದು ಬಿಡುಗಡೆಯಾಗಿತ್ತು.
ಇದೀಗ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಒಂದು ಕೋಟಿ ವೀಕ್ಷಣೆ ಪಡೆದಿದೆ. ಈ ಸಂತಸದ ವಿಚಾರವನ್ನು ಸ್ವತಃ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಅವರೇ ಹಂಚಿಕೊಂಡಿದ್ದಾರೆ. "ಜೊತೆಜೊತೆಯಲಿ ಶೀರ್ಷಿಕೆ ಗೀತೆ ಒಂದು ಕೋಟಿ ವೀಕ್ಷಣೆ ಪಡೆದಿದೆ. ಎಲ್ಲವೂ ನಿಮ್ಮ ಪ್ರೀತಿಯಿಂದಲೇ. ಮನಃಪೂರ್ವಕ ಧನ್ಯವಾದಗಳು.. ನಿಮ್ಮ ಪ್ರೀತಿಗೆ ನಾವೆಂದೂ ಸದಾ ಚಿರಋಣಿ... ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಸದಾ ಹೀಗೆ ಇರಲಿ.. Love You all " ಎಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅನಿರುದ್ಧ್ ಬರೆದುಕೊಂಡಿದ್ದಾರೆ.
ವಿಶೇಷ ಅಂದ್ರೆ ಸಂಪೂರ್ಣ ಶೀರ್ಷಿಕೆ ಗೀತೆ ಬಿಡುಗಡೆಯಾಗಿದ್ದ ಕೇವಲ 12 ಗಂಟೆಯಲ್ಲಿ ಒಂದು ಮಿಲಿಯನ್ ಅಂದರೆ 10 ಲಕ್ಷಕ್ಕೂ ಹೆಚ್ಚಿನ ಜನ ವೀಕ್ಷಿಸಿದ್ದರು. ಇದೀಗ ನಾಲ್ಕು ತಿಂಗಳುಗಳಲ್ಲಿ ಒಂದು ಕೋಟಿ ವೀಕ್ಷಣೆ ಪಡೆದಿದೆ ಈ ಹಾಡು.