ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿ ಸಾಕಷ್ಟು ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಆರಂಭದ ವಾರದಿಂದಲೂ ಟಿಆರ್ಪಿಯಲ್ಲಿ ಮುಂದೆ ಇರುವ ಜೊತೆಜೊತೆಯಲಿ ಧಾರಾವಾಹಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದೆ. ವಿಭಿನ್ನ ಕಥಾ ಶೈಲಿಯ ಮೂಲಕ ವೀಕ್ಷಕರನ್ನು ಸೆಳೆದಿರುವ ಜೊತೆಜೊತೆಯಲಿ ಧಾರಾವಾಹಿ ತಂಡ ಜನರಿಗೆ ಸಿಹಿ ಸುದ್ದಿಯನ್ನು ನೀಡಿದೆ.
ಇಷ್ಟು ದಿನ ಜನ ಜೊತೆಜೊತೆಯಲಿ ಧಾರಾವಾಹಿ ಜಾತ್ರೆ ಮಾಡಿ ಎಂದು ಮೆಸೇಜ್, ಫೋನ್ ಮೂಲಕ ಅಭಿಮಾನಿಗಳು ಪರಿಪರಿಯಾಗಿ ಕೇಳಿಕೊಂಡಿದ್ದರು. ಜನರ ಪ್ರೀತಿಯ ಮನವಿಗೆ ಓಗೊಟ್ಟು ಧಾರಾವಾಹಿ ತಂಡ ಇದೀಗ ಜೊತೆಜೊತೆಯಲಿ ಜಾತ್ರೆ ನಡೆಸಲು ಸಜ್ಜಾಗಿದೆ.
ಕೋಟೆಯ ನಾಡು ಚಿತ್ರದುರ್ಗದಲ್ಲಿ ಜೊತೆಜೊತೆಯಲಿ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ. ಸಾಹಸಸಿಂಹ ವಿಷ್ಣುವರ್ಧನ್ ರಾಮಾಚಾರಿಯಾಗಿ ಬಣ್ಣದ ಲೋಕಕ್ಕೆ ಪರಿಚಿತರಾದ ಚಿತ್ರದುರ್ಗದಲ್ಲಿ ಮೊದಲ ಜಾತ್ರೆ ನಡೆಯಲಿದೆ.
ಧಾರಾವಾಹಿಯ ಇಡೀ ತಂಡ ಈಗಾಗಲೇ ಚಿತ್ರದುರ್ಗದಲ್ಲಿ ಬೀಡುಬಿಟ್ಟಿದೆ. ಚಿತ್ರದುರ್ಗದ ಜನತೆ ಬಹಳ ಪ್ರೀತಿಯಿಂದ ಧಾರಾವಾಹಿ ತಂಡದವರನ್ನು ಬರಮಾಡಿಕೊಂಡಿದ್ದಾರೆ. ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಶ್ರೀ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಈ ಜಾತ್ರೆ ನಡೆಯುತ್ತಿದೆ.
ಧಾರಾವಾಹಿ ನಾಯಕ ಆರ್ಯವರ್ಧನ್ ಮತ್ತು ನಾಯಕಿ ಅನು, ಜೊತೆಗೆ ಉಳಿದ ಕಲಾವಿದರುಗಳು ಕಾರ್ಯಕ್ರಮ ನೀಡುತ್ತಿದ್ದಾರೆ. ಈಗಾಗಲೇ ಈ ವಿಷಯ ಕಿರುತೆರೆ ವೀಕ್ಷಕರಿಗೆ ತಿಳಿದಿದ್ದು ಅದ್ಯಾವಾಗ ಚಾನೆಲ್ನಲ್ಲಿ ಪ್ರಸಾರವಾಗಲಿದೆ ಎಂದು ಕಾಯುತ್ತಿದ್ದಾರೆ.
ಜೊತೆ ಜೊತೆಯಲಿ ತಂಡ ನಿನ್ನೆ ಹಾಗೂ ಇವತ್ತು ಚಿತ್ರದುರ್ಗದ ಹಲವು ಪ್ರದೇಶಗಳಿಗೆ ಭೇಟಿ ನೀಡಿ ತಮ್ಮ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು. ಅಲ್ಲದೆ, ಧಾರಾವಾಹಿಯ ತಂಡದ ಸದಸ್ಯರು ಚಿತ್ರದುರ್ಗವನ್ನು ಸುತ್ತು ಹಾಕಿ, ಪ್ರತಿ ದಿನ ಬಿಡುವಿಲ್ಲದ ಶೂಟಿಂಗ್ ನಡೆಸುತ್ತಿದ್ದಾರೆ.