ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಹೊಸ ಪ್ರತಿಭೆಗಳ ಚಿತ್ರಗಳು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಇದೇ ಭರವಸೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಟ್ಯಾಲೆಂಟ್ ಇರುವ ನಿರ್ದೇಶಕರು ಹಾಗೂ ನಟ - ನಟಿಯರ ಆಗಮನವಾಗುತ್ತಿದೆ. ಇದೀಗ ಹೊಸಬರ ಚಿತ್ರತಂಡವೊಂದು 'ಅಮರ ಪ್ರೇಮಿ ಅರುಣ್' ಅಂತಾ ಟೈಟಲ್ ಇಟ್ಟುಕೊಂಡು ಸದ್ದಿಲ್ಲದೇ ಬಳ್ಳಾರಿಯಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ.
ಇದು ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಕಥೆ. ಹಾಗಾಗಿ ಅಮರ ಪ್ರೇಮಿ ಅರುಣ್ ಸಿನಿಮಾ ಪ್ರೇಮಕಥೆ ಜೊತೆ ಕಾಮಿಡಿಯಿಂದ ಕೂಡಿರುತ್ತೆ. ಕಹಿ ಚಿತ್ರದಲ್ಲಿ ಅಭಿನಯಿಸಿದ್ದ ಹರಿಶರ್ವಾ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಉಳಿದಂತೆ, ದೀಪಿಕಾ ಆರಾಧ್ಯ ಹಾಗೂ ಭೂಮಿಕಾ ರಘು, ಧರ್ಮಣ್ಣ, ಮಹೇಶ್ ಬಂಗ್, ಸುಶ್ಮಿತಾ ಮುಂತಾದ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿಶೇಷ ಅಂದರೆ ಈ ಸಿನಿಮಾದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿರುವ ಪದ್ಮಶ್ರೀ 'ಜೋಗತಿ ಮಂಜಮ್ಮ' ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಖ್ಯಾತ ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ಕೂಡ ಅಮರ ಪ್ರೇಮಿ ಅರುಣ್ ಚಿತ್ರದಲ್ಲಿ ನಟಿಸಿದ್ದಾರೆ. ಬಳ್ಳಾರಿ ನಗರದ ಪ್ರಮುಖ ಜಾಗಗಳಲ್ಲಿ ನಾಯಕ ಹರಿಶರ್ವಾ, ನಾಯಕಿ ದೀಪಿಕಾ ಆರಾಧ್ಯ ಸೇರಿದಂತೆ ಧರ್ಮಣ್ಣ, ಭೂಮಿಕಾ ಭಟ್, ಮಹೇಶ್ ಬಂಗ್, ಬಲರಾಜ್ವಾಡಿ, ರೋಹಿಣಿ, ವಿಜಯಲಕ್ಷ್ಮಿ ಮತ್ತು ಅನೇಕ ಕಲಾವಿದರ ನಟನೆಯಲ್ಲಿ ದೃಶ್ಯಗಳನ್ನು ನಿರ್ದೇಶಕ ಪ್ರವೀಣ್ ಕುಮಾರ್ ಜಿ. ಚಿತ್ರೀಕರಿಸಿಕೊಂಡಿದ್ದಾರೆ.
ಚಿತ್ರದ ಐದು ಹಾಡುಗಳಿಗೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಈ ಚಿತ್ರದ ಹಾಡುಗಳನ್ನು ಬರೆಯುತ್ತಿದ್ದಾರೆ. ಷಣ್ಮುಖ ಅವರ ಸಂಕಲನ, ಹಿರೆಮಧುರೆ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಛಾಯಾಗ್ರಹಣವನ್ನು ಎಸ್. ಪ್ರವೀಣ್ ಮಾಡುತ್ತಿದ್ದಾರೆ. ಒಲವು ಸಿನಿಮಾ ಸಂಸ್ಥೆಯ ಅಡಿ ಈ ಸಿನಿಮಾವನ್ನ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ಮೊದಲ ಹಂತದ ಚಿತ್ರೀಕರಣ ಮುಗಿಸಿರೋ ಅಮರ ಪ್ರೇಮಿ ಅರುಣ್ ಸಿನಿಮಾ ಎರಡನೇ ಹಂತದ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿದೆ.
ಓದಿ: ರಾಜ್ಯದಲ್ಲಿ ಯಾರೇ ಸಿಎಂ ಆದರೂ ಒಂದು ರೀತಿಯ ಮಕ್ಕಳ ಆಟ ನಿರ್ಮಾಣವಾಗಿದೆ: ಕುಮಾರಸ್ವಾಮಿ