ಹೈದರಾಬಾದ್: ಟಾಲಿವುಡ್ ಹಿರಿಯ ನಟ ಜಯಪ್ರಕಾಶ ರೆಡ್ಡಿ (74) ಇಂದು ಗುಂಟೂರಿನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸ್ನಾನದ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ಸೇರಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.
ಮೂಲತಃ ಕರ್ನೂಲ್ ಜಿಲ್ಲೆಯ ಆಳ್ಲಗಡ್ಡ ಮೂಲದವರಾದ ಇವರು ಲಾಕ್ಡೌನ್ ಶುರುವಾದಾಗಿನಿಂದ ಗುಂಟೂರು ನಗರದಲ್ಲಿ ವಾಸವಿದ್ದರು. ಟಾಲಿವುಡ್ನಲ್ಲಿ ಹಾಸ್ಯ ನಟರಾಗಿದ್ದ ಇವರು ತಮ್ಮ ವಿಶಿಷ್ಠ ಧ್ವನಿಯಿಂದ ಮನೆಮಾತಾಗಿದ್ದರು.
ತೆಲುಗು ಚಿತ್ರ ಸಮರಸಿಂಹ ರೆಡ್ಡಿ ಚಿತ್ರದಲ್ಲಿ ವೀರ ರಾಘವ ರೆಡ್ಡಿ ಪಾತ್ರದಿಂದ ಪ್ರಸಿದ್ಧಿ ಬಂದ ಇವರು ಕೆಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ಜಯಪ್ರಕಾಶ ರೆಡ್ಡಿ ನಟಿಸಿದ್ದರು.