ಸೌಂದರ್ಯ ಹಾಗೂ ಪ್ರತಿಭೆಯ ಸಂಗಮ ನಟಿ ಜಯಪ್ರದ ಹುಟ್ಟಿ ಬೆಳೆದದ್ದು ಆಂಧ್ರ ಪ್ರದೇಶದಲ್ಲಾದರೂ ತೆಲುಗಿಗಿಂತ ಹೆಸರು ಮಾಡಿದ್ದು ಬಾಲಿವುಡ್ನಲ್ಲಿ. ಸಿನಿಮಾ ಜೊತೆ ಜೊತೆಗೆ ರಾಜಕೀಯದಲ್ಲಿ ಕೂಡಾ ಅವರು ಗುರುತಿಸಿಕೊಂಡಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಸಿನಿಮಾಗಳು ಹೆಚ್ಚಾಗಿ ತಯಾರಾಗುತ್ತಿವೆ. ಅದರಂತೆ ಜಯಪ್ರದಾ ಕೂಡಾ ತಮ್ಮ ಬದುಕನ್ನು ತೆರೆ ಮೇಲೆ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ನನ್ನ ಆತ್ಮಚರಿತ್ರೆಯನ್ನು ತೆರೆ ಮೇಲೆ ನೋಡುವ ತವಕವಿದೆ. ಇದನ್ನು ಒಬ್ಬ ಮಹಿಳೆ ಬರೆದು ನಿರ್ದೇಶನ ಮಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ. ಒಂದು ಹೆಣ್ಣಿಗೆ ಇನ್ನೊಂದು ಹೆಣ್ಣಿನ ಕಷ್ಟ ಕಾರ್ಪಣ್ಯಗಳು ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ನನ್ನ ಬಯೋಪಿಕನ್ನು ಮಹಿಳೆ ಬರೆದರೆ ಚೆನ್ನಾಗಿರುತ್ತದೆ ಎನ್ನುತ್ತಾರೆ.
1974 ರಲ್ಲಿ ಚಿತ್ರರಂಗಕ್ಕೆ ಬಂದ ಜಯಪ್ರದಾ ಅವರು 40 ವರ್ಷಗಳ ಕಾಲ ಚಿತ್ರರಂಗದಲ್ಲಿ ದುಡಿದಿದ್ದಾರೆ. 2019 ರಿಂದ ಬಿಜೆಪಿ ಪಕ್ಷದಲ್ಲಿ ಕೂಡಾ ಅವರು ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಸಿಕರಿಗೆ ಜಯಪ್ರದ ಎಂದರೆ ನೆನಪಿಗೆ ಬರುವುದು ಸನಾದಿ ಅಪ್ಪಣ್ಣ, ಹುಲಿಯ ಹಾಲಿನ ಮೇವು, ಕವಿರತ್ನ ಕಾಳಿದಾಸ, ಆತ್ಮಬಂಧನ, ಮಣಿಕಂಠನ ಮಹಿಮೆ, ಹಿಮಪಾತ, ಪ್ರೇಮಗೀತೆ, ಈ ಬಂಧನ, ಹಬ್ಬ, ಶಬ್ಧವೇದಿ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಜಯಪ್ರದ ಕಿತ್ತೂರು ಚೆನ್ನಮ್ಮ ಪಾತ್ರದಲ್ಲಿ ನಟಿಸಿದ್ದರು.
ಅಣ್ಣಾವ್ರ ಜೊತೆ ಅವರು ನಟಿಸಿದ್ದ 'ಸನಾದಿ ಅಪ್ಪಣ್ಣ' ಚಿತ್ರದ ಕರೆದರೂ ಕೇಳದೆ.. ಹಾಡು ಇಂದಿಗೂ ಬಹಳ ಫೇಮಸ್. ಒಟ್ಟಿನಲ್ಲಿ ಜಯಪ್ರದ ಆಸೆಯಂತೆ ಅವರ ಬಯೋಪಿಕ್ ಯಾವಾಗ ತೆರೆ ಮೇಲೆ ಬರಲಿದೆಯೋ ಕಾದು ನೋಡಬೇಕು.